ಆಮ್ನೆಸ್ಟಿ ಸಂಘಟನೆ ನಿಷೇಧಕ್ಕೆ ಎಬಿವಿಪಿ ಆಹೋರಾತ್ರಿ ಧರಣಿ

ABVp

ಬೆಂಗಳೂರು, ಆ.20-ವಿವಾದಿತ ಆಮ್ನೆಸ್ಟಿ ಸಂಘಟನೆ ನಿಷೇಧಕ್ಕೆ ಒತ್ತಾಯಿಸಿ ದೇಶದ್ರೋಹಿಗಳ ಬಂಧನಕ್ಕೆ ಆಗ್ರಹಿಸಿ ಎಬಿವಿಪಿ ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿರುವ ಪ್ರತಿಭಟನೆ ತೀವ್ರಗೊಂಡಿದ್ದು, ಇಂದಿನಿಂದ ಅಹೋರಾತ್ರಿ ಧರಣಿ ಕೈಗೊಂಡಿದೆ.ಪ್ರತಿಭಟನೆ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಎರಡು ಬಾರಿ ಲಾಠಿ ಚಾರ್ಜ್ ನಡೆಸಿದರೂ ಕಾರ್ಯಕರ್ತರು ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ. ಹೋರಾಟದ ತಮ್ಮ ಸ್ವರೂಪ ಬದಲಾಯಿಸಿಕೊಂಡು ದೇಶದ್ರೋಹಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.  ಕಳೆದ ಎರಡು ದಿನಗಳಿಂದ ಅಸಹಕಾರ ಪ್ರತಿಭಟನೆ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತರು ಇಂದಿನಿಂದ ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಇಂದಿನಿಂದ ಎರಡು ದಿನಗಳ ಅಹೋರಾತ್ರಿ ಪ್ರತಿಭಟನೆ ನಡೆಸಲಿದ್ದಾರೆ. ಎಬಿವಿಪಿ ಮುಖಂಡರಾದ ವಿನಯ್ ಬಿದರೆ ಮಾತನಾಡಿ, ತಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಲಾಠಿಯಿಂದ, ಬಂಧನದಿಂದ ನಮ್ಮ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಅಮ್ನೆಸ್ಟಿ ವಿರುದ್ಧ ನಗರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ

ಬೆಂಗಳೂರು, ಆ.20-ಆಮ್ನೆಸ್ಟಿ ಸಂಘಟನೆಯನ್ನು ನಿಷೇಧಿಸಬೇಕು, ದೇಶ ವಿರೋಧಿ, ಸೇನೆ ವಿರೋಧಿ ಘೋಷಣೆ, ಭಾಷಣ ಮಾಡಿದವರನ್ನು ಬಂಧಿಸಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಇಂದು ಬಿಜೆಪಿ ಮುಖಂಡರು ನಗರದ ಆನಂದ್ ರಾವ್ ವೃತ್ತದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.  ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಆರ್.ಅಶೋಕ್ ಮಾತನಾಡಿ, ರಾಜ್ಯಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಎಲ್ಲಾ ವಿಷಯದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.  ದೇಶ, ಭಾಷೆ, ನೆಲ, ಜಲ ವಿಷಯದಲ್ಲಿ ರಾಜಕೀಯ ಮಾಡುವುದನ್ನು ಬಿಡಲಿ. ಬೇರೆ ವಿಷಯದಲ್ಲಿ ಬೇಕಾದರೆ ರಾಜಕೀಯ ಮಾಡಲಿ. ದೇಶ ಪ್ರೇಮ, ದೇಶಭಕ್ತಿ ಇದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ದೇಶದ್ರೋಹ ಘಟನೆಗೆ ಕಾರಣರಾದವರನ್ನು ಬಂಧಿಸಿ ಕ್ರಮಕೈಗೊಳ್ಳಲಿ ಎಂದು ಸವಾಲು ಹಾಕಿದರು.

ಒತ್ತುವರಿ ತೆರವು ಮಾಡುತ್ತಿದ್ದಾರೆ. ಅದನ್ನು ನಂತರ ಮಾಡಬಹುದು. ಮೊದಲು ದೇಶ ದ್ರೋಹಿಗಳನ್ನು ಬಂಧಿಸಿ ದೇಶ ರಕ್ಷಣೆಗೆ ಗಮನ ಕೊಡಿ ಎಂದು ಹೇಳಿದರು. ಇಂದು ಕಾಶ್ಮೀರ ಕೇಳುತ್ತಾರೆ, ನಾಳೆ ರಾಜಸ್ಥಾನ, ಮುಂದೆ ದೇಶವನ್ನೇ ಕೊಳ್ಳೆ ಹೊಡೆಯುತ್ತಾರೆ. ಯಾವುದೇ ಕಾರಣಕ್ಕೂ ನಾವು ಇಂಥವರಿಗೆ ಅವಕಾಶ ನೀಡುವುದಿಲ್ಲ ಎಂದರು.  ಆಮ್ನೆಸ್ಟಿ ಸಂಘಟನೆ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದವರನ್ನು ಬಿಟ್ಟು ಇದನ್ನು ವಿರೋಧಿಸಿದ ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ನಡೆಸಿ ಬಂಧಿಸಿರುವ ಕ್ರಮ ಖಂಡನೀಯ. ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಮಾಜಿ ಸಚಿವ ಸುರೇಶ್ಕುಮಾರ್ ಮಾತನಾಡಿ, ಸರ್ಕಾರದ ವಿಳಂಬ ನೀತಿಯನ್ನು ಖಂಡಿಸಿದರು.
ಆಮ್ನೆಸ್ಟಿ ಸಂಘಟನೆ ವಿರುದ್ಧ ಯಾವುದೇ ಕ್ರಮಕೈಗೊಳ್ಳದಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಆದೇಶ ನೀಡುವ ಮೂಲಕ ದೇಶದ್ರೋಹಿಗಳನ್ನು ಬೆಂಬಲಿಸುತ್ತಿದೆ ಎಂದು ಹೇಳಿದರು.
ಸಂಸದ ಪಿ.ಸಿ.ಮೋಹನ್, ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧ, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

► Follow us on –  Facebook / Twitter  / Google+

Sri Raghav

Admin