ಆರ್‌ಆರ್‌ ನಗರ ವೋಟರ್ ಐಡಿ ಗೋಲ್‍ಮಾಲ್ : ಚುನಾವಣೆ ಅತಂತ್ರ, ಕ್ಷಣ ಕ್ಷಣಕ್ಕೂ ಟ್ವಿಸ್ಟ್

Voter-Cards--01

ಬೆಂಗಳೂರು, ಮೇ 9-ಕ್ಷಣಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿರುವ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪತ್ತೆಯಾದ ಅಸಲಿ ಮತದಾರರ ಗುರುತಿನ ಚೀಟಿ ಪ್ರಕರಣ ಶನಿವಾರ ನಡೆಯಲಿರುವ ಮತದಾನದ ಮೇಲೆ ಕಾರ್ಮೋಡ ಆವರಿಸಲಿದೆ. ಮತದಾನ ನಡೆಯಲು ಇನ್ನು ಮೂರು ದಿನಗಳು ಬಾಕಿ ಇರುವಾಗಲೇ ಖಾಸಗಿ ಅಪಾರ್ಟ್‍ಮೆಂಟ್‍ನಲ್ಲಿ 10 ಸಾವಿರಕ್ಕೂ ಹೆಚ್ಚು ಅಸಲಿ ಮತದಾರರ ಗುರುತಿನ ಚೀಟಿ ಪತ್ತೆಯಾಗಿರುವುದರಿಂದ ಈ ಕ್ಷೇತ್ರದಲ್ಲಿ ಚುನಾವಣೆ ನಡೆಯಲಿದೆಯೇ ಅಥವಾ ಮುಂದೂಡಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗವು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದು , ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ಕಳೆದ ಮಧ್ಯರಾತ್ರಿಯಿಂದ ನಡೆಯುತ್ತಿರುವ ಹೈಡ್ರಾಮಾ ಕ್ಷಣ ಕ್ಷಣಕ್ಕೂ ರೋಚಕತೆ ಪಡೆದುಕೊಳ್ಳುತ್ತಿದೆ ಕಾಂಗ್ರೆಸ್ ವಿರುದ್ಧ ಬಿಜೆಪಿ, ಬಿಜೆಪಿ ವಿರುದ್ಧ ಕಾಂಗ್ರೆಸ್ ಪರಸ್ಪರ ಆರೋಪ ಮತ್ತು ಪ್ರತ್ಯಾರೋಪಗಳನ್ನು ಮಾಡುತ್ತಿರುವುದರಿಂದ ಚುನಾವಣಾ ಆಯೋಗ ಇಂಚಿಂಚು ಮಾಹಿತಿಯನ್ನು ಕಲೆ ಹಾಕಲು ಮುಂದಾಗಿದೆ.

ಕಳೆದ ರಾತ್ರಿಯಿಂದಲೇ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಬೀಡು ಬಿಟ್ಟಿರುವ ಉತ್ತರ ವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್, ಬಿಬಿಎಂಪಿ ಆಯುಕ್ತ ಹಾಗೂ ನಗರ ಚುನಾವಣಾಧಿಕಾರಿ ಮಹೇಶ್ವರ ರಾವ್, ಐಜಿಪಿ ವೇಣುಗೋಪಾಲ್, ಹಿರಿಯ ಐಎಎಸ್ ಅಧಿಕಾರಿ ಇಂದಿರಾ ಹಾಗೂ ವೀಕ್ಷಕರಾದ ಶೈಲಜಾ ಪ್ರಕರಣದ ತನಿಖೆ ನಡೆಸಿ ಆಯೋಗಕ್ಕೆ ವರದಿ ನೀಡಲಿದ್ದಾರೆ. ಜಾಲಹಳ್ಳಿಯ ಎಸ್‍ಎಲ್‍ವಿ ಅಪಾರ್ಟ್‍ಮೆಂಟ್‍ನಲ್ಲಿ ಪತ್ತೆಯಾದ ಅಸಲಿ ಗುರುತಿನ ಚೀಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತಂಡವು ತನಿಖೆ ನಡೆಸಿ ವರದಿ ನೀಡಿದ ಬಳಿಕವೆ ಆರ್.ಆರ್.ನಗರದ ಚುನಾವಣಾ ಭವಿಷ್ಯ ತೀರ್ಮಾನವಾಗಲಿದೆ. ಇಂದು ಅಧಿಕಾರಿಗಳು ನಿನ್ನೆ ವಶಪಡಿಸಿಕೊಂಡಿದ್ದ ಲ್ಯಾಪ್‍ಟಾಪ್, ಗುರುತಿನ ಚೀಟಿ ಮುದ್ರಿಸುವ ಯಂತ್ರ ಹಾಗೂ ಟ್ರಂಕ್‍ನಲ್ಲಿ ಸಿಕ್ಕಿದ್ದ ವಸ್ತುಗಳ ಬಗ್ಗೆ ಮಾಹಿತಿ ಕಲೆಹಾಕಿದರು.

ಸಿಸಿಟಿವಿ ತಿರುಗಿಸಿದ್ದ ಕಿಲಾಡಿಗಳು:
ಇನ್ನು ಎಸ್‍ಎಲ್‍ವಿ ಅಪಾರ್ಟ್‍ಮೆಂಟ್‍ನಲ್ಲಿ ಕಿಲಾಡಿಗಳು ತಮ್ಮ ಗುರುತು ಪತ್ತೆಯಾಗಬಾರದೆಂಬ ಹಿನ್ನೆಲೆಯಲ್ಲಿ ಸಿಸಿಟಿವಿಯನ್ನು ಮನೆಯ ಎದುರು ದಿಕ್ಕಿಗೆ ತಿರುಗಿಸಿದ್ದಾರೆ ಎನ್ನಲಾಗಿದೆ. ಇನ್ನು ಈ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ರಾಕೇಶ್ ಪಾತ್ರ ಇನ್ನು ನಿಗೂಢವಾಗಿಯೇ ಉಳಿದಿದೆ. ಬಿಬಿಎಂಪಿ ಕಾಪೆರ್Çೀರೇಟ್‍ರೊಬ್ಬರ ದತ್ತು ಮಗ ಇವರೇ ಎನ್ನಲಾಗುತ್ತಿದೆ. ಆದರೆ ಇದನ್ನು ಅವರು ನಿರಾಕರಿಸಿದ್ದು , ಅನಗತ್ಯವಾಗಿ ಪ್ರಕರಣದಲ್ಲಿ ನನ್ನ ಹೆಸರನ್ನು ತಳಕು ಹಾಕಲಾಗುತ್ತಿದೆ ಎಂದು ದೂರಿದ್ದಾರೆ.

ಆರೋಪ-ಪ್ರತ್ಯಾರೋಪ:
ಇನ್ನು ಈ ಪ್ರಕರಣ ಕುರಿತಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಪರಸ್ಪರ ಆರೋಪ, ಪ್ರತ್ಯಾರೋಪಗಳ ಸುರಿ ಮಳೆಗೈದಿದ್ದಾರೆ. ಕಾಂಗ್ರೆಸ್ ಸೋಲುವ ಹತಾಶೆಯಿಂದಾಗಿ ಅಸಲಿ ಗುರುತಿನ ಚೀಟಿಯನ್ನೇ ಸ್ವಂತ ಮನೆಯಲ್ಲಿ ಮುದ್ರಿಸಿ ಚುನಾವಣೆ ಗೆಲ್ಲಲ್ಲು ಹೊರಟಿದೆ ಎಂಬ ಬಿಜೆಪಿ ಆರೋಪವಾಗಿದೆ. ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್ ರಾಕೇಶ್ ಬಿಬಿಎಂಪಿ ಸದಸ್ಯರ ಪುತ್ರ. ಈ ಪ್ರಕರಣದ ಪ್ರಮುಖ ರೂವಾರಿಯೇ ಅವರು. ನಮ್ಮ ಮೇಲೆ ಅನಗತ್ಯವಾಗಿ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ ಎಂದು ಆಪಾದಿಸಿದೆ.

ಆಯೋಗದ ಕದ ತಟ್ಟಿದ ಉಭಯ ಪಕ್ಷಗಳು:
ಇನ್ನು ಪ್ರಕರಣದಿಂದ ನುಣುಚಿಕೊಳ್ಳಲು ಯತ್ನಿಸುತ್ತಿರುವ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗದ ಕದತಟ್ಟಿದ್ದಾರೆ. ಇದೊಂದು ಗಂಭೀರವಾದ ಪ್ರಕರಣವಾಗಿರುವುದರಿಂದ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎರಡೂ ಪಕ್ಷಗಳ ಮುಖಂಡರು ಮನವಿ ಮಾಡಿದ್ದಾರೆ. ಮತದಾನಕ್ಕೆ ಕೆಲವೇ ಗಂಟೆಗಳು ಬಾಕಿ ಇರುವುದರಿಂದ ಗುರುತಿನ ಚೀಟಿ ಪ್ರಕರಣ ಪಕ್ಷಕ್ಕೆ ಮುಳುವಾಗಬಹುದು ಎಂಬ ಹಿನ್ನಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎಚ್ಚರಿಕೆಯ ಹೆಜ್ಜೆ ಇಟ್ಟಿವೆ. ಈ ನಡುವೆ ರಾಕೇಶ್ ಇಂದು ಕೇಂದ್ರ ಸಚಿವರಾದ ಸದಾನಂದಗೌಡ ಹಾಗೂ ಪ್ರಕಾಶ್ ಜಾವ್ಡೇಕರ್ ಅವರನ್ನು ಭೇಟಿ ಮಾಡಿ ಪ್ರಕರಣದ ಬಗ್ಗೆ ವಸ್ತುಸ್ಥಿತಿಯನ್ನು ವಿವರಿಸಿದ್ದಾರೆ. ಅಂತಿಮವಾಗಿ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಚುನಾವಣಾ ಹಣೆಬರಹ ಆಯೋಗ ತೆಗೆದುಕೊಳ್ಳುವ ತೀರ್ಮಾನದ ಮೇಲೆ ನಿಂತಿದೆ.

Sri Raghav

Admin