ಆರ್.ಕೆ.ನಗರ ಉಪಚುನಾವಣೆಯಲ್ಲಿ ಯಾರಿಗೂ ಇಲ್ಲ ರಜನಿ ಬೆಂಬಲ
ಚೆನ್ನೈ, ಮಾ.23- ತಮಿಳುನಾಡಿನ ಆರ್ಕೆ ನಗರ ವಿಧಾನಸಭೆ ಉಪಚುನಾವಣಾ ಕಣದಲ್ಲಿರುವ ಯಾವ ಪಕ್ಷದ ಅಭ್ಯರ್ಥಿಗೂ ತಾವು ಬೆಂಬಲ ನೀಡುವುದಿಲ್ಲ ಎಂದು ಜನಪ್ರಿಯ ನಟ ರಜನಿಕಾಂತ್ ಇಂದು ಸ್ಪಷ್ಟಪಡಿಸಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ನಿಧನದಿಂದ ತೆರವಾಗಿದ್ದ ಆರ್ಕೆ ನಗರ ವಿಧಾನಸಭೆಗೆ ಏ.12ರಂದು ಉಪ ಚುನಾವಣೆ ನಡೆಯಲಿದೆ. ಮುಂಬರುವ ಚುನಾವಣೆಯಲ್ಲಿ ನನ್ನ ಬೆಂಬಲ ಯಾರಿಗೂ ಇಲ್ಲ ಎಂದು ಸೂಪರ್ಸ್ಟಾರ್ ರಜನಿ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಖ್ಯಾತ ಸಂಗೀತ ನಿರ್ದೇಶಕ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಗಂಗೈ ಅಮರನ್ ಭಾನುವಾರ ರಜನಿಕಾಂತ್ ಅವರನ್ನು ಭೇಟಿ ಮಾಡಿದ ಬಳಿಕ ತಲೈವ ಈ ಹೇಳಿಕೆ ನೀಡಿ, ತಾವು ಯಾವುದೇ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಮರನ್ ಅವರ ಮಗ ವೆಂಕಟ್ ಪ್ರಭು ಭಾನುವಾರ ರಜನಿ ತಮ್ಮ ತಂದೆ ಜೊತೆ ಇರುವ ಫೋಟೋವನ್ನು ಟ್ವೀಟ್ನಲ್ಲಿ ಫೋಸ್ಟ್ ಮಾಡಿದ್ದರು. ನಮ್ಮ ತಂದೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ತಲೈವ ಶುಭ ಕೋರಿದ್ದಾರೆ ಎಂದು ತಿಳಿಸಿದ್ದರು. ಗಂಗೈ ಅಮರನ್ ಭೇಟಿ ನಂತರ ರಜನಿ ಬಿಜೆಪಿಗೆ ಬೆಂಬಲ ನೀಡಲಿದ್ದಾರೆ ಎಂಬ ಊಹಾಪೋಹಾಗಳು ಹಬ್ಬಿತ್ತು. ಈಗ ಈ ಗಾಳಿ ಸುದ್ದಿಯನ್ನು ತಲೈವ ಚದುರಿಸಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >