ಆಸ್ಪತ್ರೆಯಲ್ಲಿ ಕೈಕೊಟ್ಟ ವಿದ್ಯುತ್, 3 ನವಜಾತ ಶಿಶುಗಳ ಸಾವು
ಭೋಪಾಲ್ ಸೆ.20- ಮಧ್ಯಪ್ರದೇಶದ ನಕ್ಸಲ್ ಪೀಡಿತ ಬಲಘಾಟ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿಯಿಡೀ ವಿದ್ಯುತ್ ಇಲ್ಲದ ಕಾರಣ ಮೂರು ನವಜಾತ ಶಿಶುಗಳು ಮೃತಪಟ್ಟಿವೆ. ರಾಜ್ಯದ ಸಾತ್ನಾ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯ ಹೆರಿಗೆ ವಾರ್ಡ್ನಿಂದ ನಾಯಿಯೊಂದು ಶಿಶುವನ್ನು ಎಳೆದುಕೊಂಡು ಹೋದ ಘಟನೆಯ ನೆನಪು ಅಳಿಸುವ ಮುನ್ನವೇ ಈ ಘಟನೆ ಸಂಭವಿಸಿದೆ.
ರಾಜ್ಯದ ಆರೋಗ್ಯ ಆಯುಕ್ತರು ಬಲಘಾಟ್ ಆಸ್ಪತ್ರೆಯ ಹೆರಿಗೆ ಸೇವೆ ಇಡೀ ರಾಜ್ಯದಲ್ಲೇ ಅತ್ಯುತ್ತಮ ಎಂದು ಇತ್ತೀಚೆಗೆ ತೀರ್ಮಾನಿಸಿದ್ದರು. ಈ ಆಸ್ಪತ್ರೆಯಲ್ಲಿ ಭಾನುವಾರ ಸಂಜೆ 7 ಗಂಟೆಗೆ ವಿದ್ಯುತ್ ಕಡಿತಗೊಂಡಿತ್ತು. ಆಸ್ಪತ್ರೆಯಲ್ಲಿ ಜನರೇಟರ್ ಇದ್ದರೂ, ಅದನ್ನು ಏಕೆ ಬಳಸಲಿಲ್ಲ ಎಂದು ವಿವರಿಸುವ ಸ್ಥಿತಿಯಲ್ಲಿ ಯಾವ ಅಧಿಕಾರಿಯೂ ಇಲ್ಲ. ನಿನ್ನೆ ಮುಂಜಾನೆ 6 ಗಂಟೆವರೆಗೆ ವಿದ್ಯುತ್ ಕಡಿತಗೊಂಡಿದ್ದರಿಂದ ಈ ದುರಂತ ಸಂಭವಿಸಿದೆ.
ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಡಳಿತ ಸೂಚಿಸಿದೆ. ರಾತ್ರಿಯಿಡೀ ವಿದ್ಯುತ್ ಇಲ್ಲದ ಕಾರಣ, ತುರ್ತು ನಿಗಾ ಘಟಕದಲ್ಲಿದ್ದ ಮೂರು ಶಿಶುಗಳು ಮೃತಪಟ್ಟದ್ದು ಗಮನಕ್ಕೆ ಬಂದ ತಕ್ಷಣ ರಾತ್ರಿ ಪಾಳಿ ಸಿಬ್ಬಂದಿ, ಹಸುಗೂಸುಗಳ ಮೃತದೇಹವನ್ನು ಪೋಷಕರಿಗೆ ನೀಡಿ, ಬೆಳಗಾಗುವ ಮುನ್ನವೇ ಆಸ್ಪತ್ರೆಯಿಂದ ತೆರಳುವಂತೆ ಸೂಚಿಸಿದ್ದರು ಎನ್ನಲಾಗಿದೆ. ಆದರೆ ಅಧಿಕಾರಿಗಳು ಕೇವಲ ಎರಡು ಮಕ್ಕಳು ಮಾತ್ರ ಮೃತಪಟ್ಟಿವೆ ಎಂದು ಹೇಳಿಕೊಂಡಿದ್ದಾರೆ. ಆಸ್ಪತ್ರೆ ಆಡಳಿತ ವಿರುದ್ಧ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಆಸ್ಪತ್ರೆ ಮುಂದೆ ಧರಣಿ ನಡೆಸಿದರು.
► Follow us on – Facebook / Twitter / Google+