ಆಹಾರ ಅರಸಿ ಬಂದು ನಿತ್ರಾಣಗೊಂಡು ಬಿದ್ದಿದ್ದ ಚಿರತೆ ರಕ್ಷಣೆ
ಚನ್ನಪಟ್ಟಣ, ಜು.22- ಆಹಾರ ಅರಸಿ ತೋಟವೊಂದರ ಸುತ್ತಾ ಸುತ್ತಾಡಿ ಏನೂ ಲಭ್ಯವಾಗದೆ ನಿತ್ರಾಣಗೊಂಡು ಬಿದ್ದಿದ್ದ ಗಂಡು ಚಿರತೆಯೊಂದನ್ನು ಅರಣ್ಯಾಧಿಕಾರಿಗಳು, ವೈದ್ಯರು ರಕ್ಷಿಸಿದ್ದಾರೆ. ಮಲ್ಲುಂಗೆರೆ ಗ್ರಾಮದ ಹೊರವಲಯದ ಪ್ರಕಾಶ್ ಎಂಬುವರ ತೋಟಕ್ಕೆ ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ 7 ವರ್ಷ ವಯಸ್ಸಿನ ಈ ಗಂಡು ಚಿರತೆ ಬಂದಿತ್ತು. ಸುತ್ತಮುತ್ತಲೂ ಅದು ಭೇಟಿಗಾಗಿ ತಿರುಗಾಡಿತ್ತಾದರೂ ಏನು ಸಿಗದಿದ್ದರಿಂದ ನಿತ್ರಾಣಗೊಂಡಿತ್ತು. ಕನಿಷ್ಟ ಅರಣ್ಯಕ್ಕೆ ಹಿಂತಿರುಗಲೂ ಶಕ್ತಿ ಇಲ್ಲವಾಗಿದ್ದರಿಂದ ಚಿರತೆ ಸಮೀಪದ ಬೇಲಿಯಲ್ಲಿ ಬಿದ್ದಿತ್ತು.
ತೋಟದ ಮಾಲೀಕ ಪ್ರಕಾಶ್ ಚಿರತೆಯನ್ನು ಗಮನಿಸಿ ಕೂಡಲೇ ಅರಣ್ಯಾಧಿಕಾರಿಗಳಿಗೆ ಸುದ್ದಿ ಮುಟ್ಟಿಸಿದರು. ಆ ವೇಳೆಗಾಗಲೇ ಚಿರತೆ ಗ್ರಾಮದಲ್ಲಿ ಬಿದ್ದಿರುವ ವಿಚಾರ ತಿಳಿದು ಅದನ್ನು ನೋಡಲೆಂದು ಗ್ರಾಮಸ್ಥರು ಗುಂಪು ಗುಂಪಾಗಿ ಆಗಮಿಸಿದ ಪರಿಣಾಮ ಸಿಟ್ಟಿಗೆದ್ದ ಚಿರತೆ ನಿತ್ರಾಣದ ನಡುವೆಯೂ ಗ್ರಾಮಸ್ಥರು ಸನಿಹಕ್ಕೆ ಬಾರದಂತೆ ಘರ್ಜಿಸಿ ಹಿಮ್ಮೆಟ್ಟಿಸಿತು.
ಸ್ಥಳಕ್ಕಾಗಮಿಸಿದ ವೈದ್ಯ ಸುಜಯ್ ಮತ್ತು ಸಿಬ್ಬಂದಿ ಚಿರತೆಗೆ ಅರವಳಿಕೆ ಮದ್ದು ನೀಡಿ ಅದರ ಆರೋಗ್ಯ ತಪಾಸಣೆ ಮಾಡಿ ಚಿರತೆ ಆಹಾರವಿಲ್ಲದೆ ನಿತ್ರಾಣಗೊಂಡಿದೆ ಎಂದು ತಿಳಿಸಿದರು. ಚಿರತೆಯನ್ನು ಬನ್ನೇರುಘಟ್ಟ ಅರಣ್ಯದಲ್ಲಿ ಬಿಡಲು ತೆಗೆದುಕೊಂಡು ಹೋಗಲಾಗಿದ್ದು, ಚಿಕಿತ್ಸೆಯ ನಂತರ ಆ ಪ್ರಕ್ರಿಯೆ ನಡೆಸುವುದಾಗಿ ಡಾ.ಸುಜಯ್ ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನಲ್ಲಿ ಚಿರತೆಗಳ ಹಾವಳಿ ಹೆಚ್ಚಾಗಿದ್ದು, ಮನೆ ಮುಂದೆ ಕಟ್ಟಿರುವ ಸಾಕು ನಾಯಿಗಳ ಮೇಲೆ ದಾಳಿ ನಡೆಸಿ ಹಸು, ಕರು, ಕುರಿಯನ್ನು ತಿಂದು ಹಾಕುತ್ತಿದ್ದು, ಇದರಿಂದ ಸಹಜವಾಗಿ ತಾಲ್ಲೂಕಿನ ಗ್ರಾಮಾಂತರ ಪ್ರದೇಶದ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS