ಆಹಾರ ಹುಡುಕಿಕೊಂಡು ಬಂದ ಜಿಂಕೆ ಮಸಣ ಸೇರಿತು

arasikere

ಅರಸೀಕೆರೆ, ಮಾ.10- ನೀರು ಹಾಗೂ ಆಹಾರ ಅರಸಿಕೊಂಡು ಕಾಡಿನಿಂದ ನಾಡಿಗೆ ಬಂದ ಜಿಂಕೆಯೊಂದು ಕೊನೆಗೆ ಸೇರಿದ್ದು ಮಸಣ ಎಲ್ಲೆಡೆ ಬರಗಾಲ ಆವರಿಸಿದ್ದರಿಂದ ಕಾಡಿನಲ್ಲಿ ನೀರು ಆಹಾರ ಇಲ್ಲದೆ ಕಾಡು ಪ್ರಾಣಿಗಳು ನಾಡಿನತ್ತ ವಲಸೆ ಬರುತ್ತಿವೆ. ಈ ಹಿನ್ನೆಲೆಯಲ್ಲಿ ನೀರು- ಆಹಾರ ಹುಡುಕಿಕೊಂಡು ನಾಡಿಗೆ ಬಂದ ಸುಮಾರು ಮೂರು ವರ್ಷದ ಹೆಣ್ಣು ಜಿಂಕೆ ಹೆದ್ದಾರಿ ದಾಟುವಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೃತಪಟ್ಟಿದೆ.ರಾಷ್ಟ್ರೀಯ ಹೆದ್ದಾರಿ(206) ಟಿ.ಎಚ್.ರಸ್ತೆ ಕಲಾಯ್ಕನಹಳ್ಳಿ ಸಮೀಪ ಈ ಅಪಘಾತ ಸಂಭವಿಸಿದ್ದು, ಅಪಘಾತದ ರಭಸಕ್ಕೆ ಗಾಯಗೊಂಡು ನರಳಾಡುತ್ತಿದ್ದ ಜಿಂಕೆಯನ್ನು ನಾಯಿಗಳು ಎಳೆದಾಡುತ್ತಿದ್ದನ್ನು ಗಮನಿಸಿದ ದಾರಿಹೋಕರು ನಾಯಿಗಳನ್ನು ಓಡಿಸಿ ಜಿಂಕೆಗೆ ನೀರು ಕುಡಿಸಿ ಉಳಿಸುವ ಪ್ರಯತ್ನ ಮಾಡಿದರಾದರೂ ಅದು ಫಲಿಸದೆ ಸಾವನ್ನಪ್ಪಿದೆ.ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದು, ಪಶು ವೈದ್ಯರಾದ ಮುರುಳಿ, ಮಂಜುನಾಥ್ ಮೃತ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಇಲಾಖೆಯವರು ಅಂತ್ಯಸಂಸ್ಕಾರ ನಡೆಸಿದರು. ಘಟನಾ ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ತಿಮ್ಮಯ್ಯ, ಪ್ರಭಾರ ವಲಯ ಅರಣ್ಯಾಧಿಕಾರಿ ಮಂಜೇಗೌಡ, ಸಿಬ್ಬಂದಿಗಳಾದ ಉಮೇಶ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin