ಇಂಗ್ಲೆಂಡ್ ಪ್ರಧಾನಿಗೆ ಸಿರಿಯಾ ‘ಟ್ವೀಟಿಂಗ್ ಗರ್ಲ್’ ಬಾನ ಅಲ್-ಅಬೆಡ್ ಪತ್ರ
ಅಂಕಾರ, ಮಾ.7-ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರ ಭಯಾನಕ ಕ್ರೌರ್ಯ ಮತ್ತು ಅಲ್ಲಿನ ಅಮಾಯಕರ ಭೀಕರ ದುಸ್ಥಿತಿ ಬಗ್ಗೆ ಟ್ವೀಟ್ಗಳ ಮೂಲಕ ವಿಶ್ವದ ಗಮನಸೆಳೆದಿದ್ದ ಅಲೆಪ್ಪೊದ ಒಂಭತ್ತು ವರ್ಷದ ಬಾಲಕಿ ಬಾನ ಅಲ್-ಅಬೆಡ್ ಈಗ ಮತ್ತೆ ಸುದ್ದಿಯಲ್ಲಿದ್ದಾಳೆ. ಇಂಗ್ಲೆಂಡ್ ಪ್ರಧಾನಿ ಥೆರೇಸಾ ಮೇ ಅವರಿಗೆ ಪತ್ರ ಬರೆದಿರುವ ಬಾನ, ಸಿರಿಯಾದಲ್ಲಿ ಸಾಯುತ್ತಿರುವ ಮಕ್ಕಳಿಗೆ ಸಹಾಯಹಸ್ತ ನೀಡಿ ಎಂದು ಮನವಿ ಮಾಡಿದ್ದಾಳೆ
ಬಾಲಕಿ ಬರೆದ ಪತ್ರದ ಒಕ್ಕಣೆ ಹೀಗಿದೆ :
ಸಿರಿಯಾದಲ್ಲಿ ತೀವ್ರ ಯಾತನೆ ಅನುಭವಿಸುತ್ತಿರುವ ಜನರಿಗೆ ನೆರವು ನೀಡುವ ಮಂದಿಗಾಗಿ ನಾನು ಎದುರು ನೋಡುತ್ತಿದ್ದೇನೆ. ಅವರಿಗಾಗಿ ನೀವು ಆಹಾರ, ನೀರು, ಹಾಲು ಮತ್ತು ಔಷಧಿಗಳನ್ನು ರವಾನಿಸುತ್ತೀರಾ? ಹಸಿವಿನಿಂದ ಸಾಯುತ್ತಿರುವ ಪುಟ್ಟ ಮಕ್ಕಳನ್ನು ನೀವು ನೋಡಿದ್ದೀರಾ? ನಾನು ಕಣ್ಣಾರೆ ಅದನ್ನು ನೋಡಿದ್ದೇನೆ. ಅವರಿಗೆ ಆಹಾರ ಲಭಿಸಿದರೆ ಮಾತ್ರ ಅವರು ಬದುಕುಳಿಯುತ್ತಾರೆ. ಆದರೆ ಈ ಬಗ್ಗೆ ಯಾರೂ ಗಮನಹರಿಸುತ್ತಿಲ್ಲ. ನನಗೆ ಈ ಬಗ್ಗೆ ತುಂಬಾ ಬೇಸರವಾಗಿದೆ. ಅವರಿಗಾಗಿ ನೀವು ಆಹಾರ ಮತ್ತು ಔಷಧಿಗಳನ್ನು ಕಳುಹಿಸುತ್ತೀರಿ ಎಂಬ ಬಗ್ಗೆ ನೀವು ಭರವಸೆ ನೀಡಿ. ದಯವಿಟ್ಟು ಮರೆಯಬೇಡಿ.
ಅಂಗ್ಲ ಭಾಷೆ ಮೇಲೆ ಬಾನಳಿಗೆ ವಯಸ್ಸಿಗೆ ಮೀರಿದ ಪ್ರೌಢಿಮೆ ಇದೆ. ಈಕೆಯ ತಾಯಿ ಫಾತಿಮಾ ಅಕೆಗೆ ಇಂಗ್ಲಿಷ್ ಕಲಿಸಿ, ಪತ್ರ ಬರೆಯುವುದನ್ನು ಹೇಳಿಕೊಟ್ಟಿದ್ದಾರೆ. ಅಲ್ಲದೇ ಟ್ವೀಟರ್ ಖಾತೆಯನ್ನು ಬಾನ ಹೆಸರಿನಲ್ಲಿ ತೆರೆಯಲಾಗಿದ್ದು, ಆ ಮೂಲಕ ಸಿರಿಯಾದ ಮನಕಲಕುವ ಘೋರ ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಪ್ರತಿಭೆ ಈ ಬಾಲಕಿಗೆ ಕರಗತವಾಗಿದೆ.
< Eesanje News 24/7 ನ್ಯೂಸ್ ಆ್ಯಪ್ >