ಇಂದು ಅಮಿತ್ ಷಾ – ಎಸ್.ಎಂ.ಕೃಷ್ಣ ಭೇಟಿ..?

SM-Krishna-Amith-Shah-Krish

ಬೆಂಗಳೂರು,ಮಾ.20- ಕಾಂಗ್ರೆಸ್ ಪಕ್ಷಕ್ಕೆ ವಿದಾಯ ಹೇಳಿರುವ ಕೇಂದ್ರದ ಮಾಜಿ ಸಚಿವ ಹಾಗೂ ರಾಜ್ಯದ ಹಿರಿಯ ಮುತ್ಸದ್ದಿ ಎಸ್.ಎಂ.ಕೃಷ್ಣ ಅವರು ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರನ್ನು ಭೇಟಿಯಾಗುವ ಸಂಭವವಿದೆ.   ಕಳೆದ ವಾರವೇ ಎಸ್.ಎಂ.ಕೃಷ್ಣ ಬಿಜೆಪಿ ಸೇರ್ಪಡೆಯಾಗಬೇಕಿತ್ತು. ಆದರೆ ಅವರ ಸೋದರಿ ಹಠಾತ್ ನಿಧನರಾಗಿದ್ದರಿಂದ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.   ಅಲ್ಲದೆ ಕೇಂದ್ರ ಬಿಜೆಪಿ ವರಿಷ್ಠರು ಗೋವಾ, ಮಣಿಪುರ, ಉತ್ತರಖಂಡ್ ಹಾಗೂ ಉತ್ತರಪ್ರದೇಶ ರಾಜ್ಯಗಳಲ್ಲಿ ಸರ್ಕಾರ ರಚನೆಗೆ ಗಮನಹರಿಸಿದ್ದರಿಂದ ಕೃಷ್ಣ ಸೇರ್ಪಡೆ ತಾತ್ಕಾಲಿಕವಾಗಿ ನೆನೆಗುದಿಗೆ ಬಿದ್ದಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬಿಡುವಿಲ್ಲದ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರು.

ಇದೀಗ ಪಂಚರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಿರುವುದರಿಂದ ಕೃಷ್ಣ ಅವರು ಅಮಿತ್ ಷಾ ಭೇಟಿಗೆ ಇಂದು ನವದೆಹಲಿಗೆ ತೆರಳಿದ್ದಾರೆ ಎಂದುತಿಳಿದುಬಂದಿದೆ.   ನವದೆಹಲಿಯಲ್ಲಿರುವ ಅಮಿತ್ ಷಾ ನಿವಾಸದಲ್ಲಿ ಪ್ರತ್ಯೇಕವಾಗಿ ಕೃಷ್ಣ ಭೇಟಿಯಾಗಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.   ಪಕ್ಷಕ್ಕೆ ಸೇರ್ಪಡೆಯಾಗುವ ಮುನ್ನ ತಮ್ಮ ಸ್ಥಾನಮಾನ ಕುರಿತಂತೆ ಷಾ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಅವರ ಭೇಟಿಗೆ ಸಮಯ ನಿಗದಿಯಾಗಿರುವುದರಿಂದ ಒಂದು ವಾರದೊಳಗೆ ಕಮಲವನ್ನು ಕೃಷ್ಣ ಮುಡಿಗೇರಿಸಿಕೊಳ್ಳಲಿದ್ದಾರೆ.

ಗುಂಡ್ಲುಪೇಟೆ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿರುವುದರಿಂದ ಆದಷ್ಟು ಶೀಘ್ರ ಕೃಷ್ಣ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಈ ಭಾಗದ ಎರಡೂ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವುದು ಬಿಜೆಪಿ ಲೆಕ್ಕಾಚಾರವಾಗಿದೆ.   ಮೈಸೂರು ಹಾಗೂ ಚಾಮರಾಜನಗರದಲ್ಲಿ ತಮ್ಮದೇ ಆದ ಪ್ರಭಾವವ ಹೊಂದಿರುವ ಕೃಷ್ಣ ಪ್ರಚಾರಕ್ಕೆ ಆಗಮಿಸಿದರೆ ಪಕ್ಷಕ್ಕೆ ಆನೆಬಲ ಬರುತ್ತದೆ ಎಂಬ ಆಲೋಚನೆಯಲ್ಲಿ ಬಿಜೆಪಿ ನಾಯಕರಿದ್ದಾರೆ.   ಹೀಗಾಗಿಯೇ ಆದಷ್ಟು ಶೀಘ್ರದಲ್ಲಿ ಕೃಷ್ಣ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡರೆ ಅವರ ಸೇವೆಯನ್ನು ಬಳಕೆ ಮಾಡಿಕೊಳ್ಳಬಹುದು ಎಂದು ರಾಜ್ಯ ನಾಯಕರು ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.   ಎಲ್ಲವೂ ನಿರೀಕ್ಷೆಯಂತೆ ನಡೆದರೆ ಮುಂದಿನ ವಾರ ನರೇಂದ್ರ ಮೋದಿ ಸಮ್ಮುಖದಲ್ಲಿ ಕೃಷ್ಣ ವಿದ್ಯುಕ್ತವಾಗಿ ಬಿಜೆಪಿ ಸೇರ್ಪಡೆಯಾಗುವ ಸಂಭವವಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin