ಇಂದು ರಾಷ್ಟ್ರೀಯ ಆಯುರ್ವೇಧ ದಿನ : ಮಧುಮೇಹಕ್ಕೆ ಆಯುರ್ವೇಧ ಚಿಕಿತ್ಸೆಯೊಂದೇ ಪರಿಹಾರ

ayur

ಇಂದು ಆಯುರ್ವೇದ ದಿನಾಚರಣೆ ಆಚರಿಸಲಾಗುತ್ತಿದೆ. ನಿಜಕ್ಕೂ ನಮಗೆ ಇದೊಂದು ಹೆಮ್ಮೆಯ ಸಂಗತಿ. ಏಕೆಂದರೆ ಆಯುರ್ವೇದದ ಮೂಲ ನಮ್ಮದು. ಎಲ್ಲಕ್ಕಿಂತ ಮುಖ್ಯವಾಗಿ ಇದು ಭಾರತೀಯ ವೈದ್ಯ ಪದ್ದತಿ. ಇದರ ದೇವತೆ ಧನ್ವಂತರಿ. ದೇವಾನುದೇವತೆಗಳ ವೈದ್ಯ ಎಂದು ಧನ್ವಂತರಿಯನ್ನು ಗುರುತಿಸಲಾಗಿದೆ. ಇಂತಹ ಮಹತ್ವವನ್ನು ಪಡೆದ ಆಯುರ್ವೇದಕ್ಕೆ ನಮ್ಮಲ್ಲಿ ಮಾತ್ರ ವಿಶಿಷ್ಠ ಸ್ಥಾನವಿತ್ತು. ಆದರೆ, ಅದು ಈಗ ಜಗದಗಲ ಹರಡಿ ಬಹು ಖ್ಯಾತಿ ಪಡೆದಿದೆ. ಹಾಗಾಗಿಯೇ ಇಂದು ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಇಂದು ವಿಶ್ವವನ್ನು ಮಧುಮೇಹ ಪ್ರಬಲವಾಗಿ ಕಾಡಲಾರಂಭಿಸಿದೆ. ಮುಂದಿನ ವರ್ಷ ಈ ಸಮಸ್ಯೆಯಿಂದ ಬಳಲುವವರ ಸಂಖ್ಯೆ 641 ಮಿಲಿಯನ್‍ಗೆ ತಲುಪಲಿದೆ ಎಂಬುದು ಒಂದು ಅಂದಾಜು. ಅಂದರೆ ಅದರ ದೈತ್ಯ ಹಿಡಿತ ಎಷ್ಟು ವೇಗ ಪಡೆಯುತ್ತಿದೆ ಎಂಬುದು ಭಾರೀ ಆತಂಕಕಾರಿ. ಹಾಗಾದರೆ ಇದನ್ನು ತಡೆಗಟ್ಟಲು ಸಾಧ್ಯ ವಿಲ್ಲವೇ? ಖಂಡಿತಾ ಸಾಧ್ಯವಿದೆ. ಅದರಲ್ಲೂ ಆಯುರ್ವೇದ ಅದಕ್ಕೊಂದು ದಿವ್ಯ ಚಿಕಿತ್ಸೆಯಾಗಿ ಅಂದರೆ ರಾಮಬಾಣವಾಗಿ ಪ್ರಯೋಗಿತವಾಗಿ ಭಾರೀ ಫಲಿತಾಂಶ ಕಂಡು ಬರುತ್ತಿದೆ. ಆ ಮಟ್ಟಿಗೆ ಇಂದು ಮಧುಮೇಹಕ್ಕೆ ಆಯುರ್ವೇದ ಪ್ರಭಾವಶಾಲಿ, ಪರಿಣಾಮಕಾರಿ ಮತ್ತು ಶೀಘ್ರ ಗುಣಕಾರಿ ಚಿಕಿತ್ಸೆಯಾಗಿ ಖ್ಯಾತಿ ಪಡೆಯುತ್ತಿದೆ. ಇಡೀ ವಿಶ್ವ ಇಂದು ಈ ಚಿಕಿತ್ಸೆಯತ್ತ ತನ್ನ ಚಿತ್ತ ಹರಿಸಿದೆ.

ayurveda medicines_0_0_0_0
ಇಂದು ತುಂಬಾ ಆಘಾತಕಾರಿ ಸಂಗತಿಯೆಂದರೆ ವಯಸ್ಕರಲ್ಲಿ ಈ ಸಮಸ್ಯೆ ಭಯಂಕರವಾಗಿ ಕಾಡಲಾರಂಭಿಸಿದೆ. ಈ ಅಪಾಯಕಾರಿ ಬೆಳವಣಿಗೆಯನ್ನು ತಡೆಯುವ ಸಲುವಾಗಿಯೇ ಈ ಬಾರಿ ಆಯುರ್ವೇದ ದಿನಾಚರಣೆಯಂದು ಮಧುಮೇಹ ತಡೆಗಟ್ಟುವಿಕೆ ಬಗ್ಗೆ ಪ್ರಧಾನವಾಗಿ ಚರ್ಚೆಯಾಗುತ್ತಿದೆ. ಇಂತಹ ಕಾಲಘಟ್ಟದಲ್ಲಿ ಇಂದು ಆಚರಿಸುತ್ತಿರುವ ಆಯುರ್ವೇದ ದಿನಾಚರಣೆಗೆ ಭಾರೀ ಮಹತ್ವ ಎಲ್ಲಡೆ ಕಂಡು ಬಂದಿದೆ. ಮಧುಮೇಹ ಮನುಷ್ಯನನ್ನು ನಿಧಾನಕ್ಕೆ ಕೊಲ್ಲುವ ಒಂದು ಅತಿ ಕೆಟ್ಟ ಸಮಸ್ಯೆ. ಇದು ನಮ್ಮ ಜೀವನಶೈಲಿ, ಆಹಾರ ಪದ್ದತಿ ಮತ್ತು ಎಲ್ಲಕ್ಕಿಂತ ಮಿಗಿಲಾಗಿ ಅಧಿಕ ಒತ್ತಡದ ಪರಿಣಾಮದಿಂದ ದುಬಾರಿ ರೂಪ ಪಡೆಯುತ್ತಾ ಸಾಗಿದೆ. ಇದರಿಂದಾಗಿ ಕ್ರಮೇಣ ದೇಹದ ಅವಯವಗಳ ಮೇಲೆ ಭಾರಿ ದುಷ್ಪರಿಣಾಮ ಉಂಟಾಗಲಿದೆ. ಕಣ್ಣು, ಮೂತ್ರಪಿಂಡ, ಹೃದಯ, ಮಿದುಳು ಮತ್ತು ನರಗಳ ಮೇಲೆ ಇದು ಸಾಕಷ್ಟು ಪ್ರಮಾಣದಲ್ಲಿ ಪ್ರಭಾವ ಬೀರುತ್ತದೆ.

ಆ ಮೂಲಕ ನರದೌರ್ಬಲ್ಯ, ಪಾಶ್ರ್ವವಾಯು, ಹೃದಯರೋಗಗಳು ವೇಗ ಪಡೆದು ಮನುಷ್ಯನ ಬದುಕಿಗೆ ಅಂತಿಮ ಅಂಕ ಎಳೆದುಬಿಡುತ್ತದೆ. ಭಾರೀ ಅಪಾಯಕಾರಿ ಎಂದೇ ಪರಿಗಣಿಸಲ್ಪಟ್ಟಿ ರುವ ಈ ಸಮಸ್ಯೆಗೆ ಮಾನಸಿಕ ಒತ್ತಡವೂ ಒಂದು ಪ್ರಮುಖ ಕಾರಣ. ಜೊತೆಗೆ ಇಂದಿನ ಆಧುನಿಕ ಆಹಾರ ಪದ್ದತಿಯೂ ದೇಹದ ಅಂಗಾಂಗಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಈ ಎರಡನ್ನೂ ಹತೋಟಿಯಲ್ಲಿಟ್ಟುಕೊಂಡರೆ ಬಹುಪಾಲು ಮಧುಮೇಹ ಸಮಸ್ಯೆಯಿಂದ ಪಾರಾಗುವುದು ಸುಲಭ. ಈ ಜಗ್ರತೆ ಮಧುಮೇಹ ಕಾಡುವುದಕ್ಕೆ ಮುಂಚೆ ತುಂಬಾ ಆಗತ್ಯ. ಆದರೆ, ಮಧುಮೇಹ ಒಮ್ಮೆ ಆವರಿಸಿಕೊಂಡ ಮೇಲೆ ನಮ್ಮ ಬಗ್ಗೆ ನಮಗೆ ಅತಿಯಾದ ಕಾಳಜಿ ತುಂಬಾ ಅನಿವಾರ್ಯ. ಅಷ್ಟೇ ಅಲ್ಲ ಅದನ್ನು ಹತೋಟಿಯಲ್ಲಿಡುವುದು ತುಂಬಾ ಮುಖ್ಯ.ಈ ಬಗ್ಗೆ ಇಂದು ಎಲ್ಲರೂ ನಾನಾ ರೀತಿಯ ಪ್ರಯೋಗಗಳಿಗೆ ಮೊರೆ ಹೋಗುತ್ತಿದ್ದಾರೆ. ಆದರೆ ಅವರು ಜೊತೆಗೆ ಇದನ್ನು ಪ್ರಮುಖವಾಗಿ ಪರಿಗಣಿಸಬೇಕು.

ತಮ್ಮ ಆಹಾರ – ವಿಹಾರ ಮತ್ತು ಆಚಾರ – ವಿಚಾರಗಳಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವುದು ತುಂಬಾ ಅನಿವಾರ್ಯ. ಮಧುಮೇಹ ಅಂದರೆ ಸಕ್ಕರೆ ಕಾಯಲೆ ಎಂದೇ ಸಾಮಾನ್ಯವಾಗಿ ಕರೆಯಲ್ಪಡುವ ಈ ಸಮಸ್ಯೆ ಇಪ್ಪತ್ತೊಂದನೇ ಶತಮಾನದ ಅತಿ ದೊಡ್ಡ ಸವಾಲು. ತಾಯಿ ಗರ್ಭದಿಂದಲೇ ಆರಂಭ ಕಾಣುತ್ತಿರುವ ಇದು ಎಲ್ಲಾ ವಯೋಮಾನದವರನ್ನು ಕಾಡಲಾರಂಭಿಸಿದೆ. ಹಾಗಾಗಿ ಇದರ ತಡೆಗೆ ಪ್ರತಿಯೊಬ್ಬರು ಜಗರೂಕತೆ ವಹಿಸಲೇಬೇಕಾಗಿದೆ.ಅದರಲ್ಲೂ ಯುವಜನತೆಯನ್ನು ಈ ನರಕದಿಂದ ಕಾಪಾಡಲೇಬೇಕಾದ ಅನಿವಾರ್ಯತೆ ಇದೀಗ ತೀರಾ ಅನಿವಾರ್ಯ. ಈ ನಿಟ್ಟಿನಲ್ಲಿ mody ಅಂದರೆ ಮೆಚ್ಯುರಿಟಿ ಆನ್‍ಸೆಟ್ ಡಯಾಬಿಟಿಸ್ ಆಫ್ ದಿ ಯಂಗ್ ಎಂಬ ಸೂತ್ರದ ಮೇಲೆ ಈ ಸಮಸ್ಯೆ ನಿವಾರಣೆಗೆ ರಣತಂತ್ರಗಳನ್ನು ಎಣೆಯಲಾಗುತ್ತಿದೆ. ಆದರೆ, ಮಧುಮೇಹ ಸಾಂಕ್ರಾಮಿಕ ರೋಗವಲ್ಲ. ಅದ್ದರಿಂದ ಅದನ್ನು ಸುಲಭವಾಗಿ ತಡೆಯಬಹುದು ಎಂಬುದು ಆಯುರ್ವೇದದ ಪ್ರಮುಖ ಮೂಲಮಂತ್ರ.
ಸ್ವಸ್ಥಸ್ಯ ಸ್ವಾಸ್ಥ್ಯ ರಕ್ಷಣಂಆತುರಸ್ಯ ರೋಗ ಪ್ರಶಮಣಂ… ಎಂಬ ಬಹು ಮುಖ್ಯ ಉದ್ದೇಶದೊಂದಿಗೆ ಆಯುರ್ವೇದ ಈ ಸಮಸ್ಯೆ ಪರಿಹಾರಕ್ಕೆ ಟೊಂಕ ಕಟ್ಟಿ ನಿಂತಿದೆ. ಭಾರತ ಸರ್ಕಾರವೂ ಪ್ರಪ್ರಥಮ ಬಾರಿಗೆ ಆಯುರ್ವೇದ ಅಧ್ಯಯನದ ಮೂಲಕ ಈ ಕಾಯಿಲೆ ತಡೆಗೆ ಮುಂದಾಗಿದೆ. ಮಧುಮೇಹಕ್ಕೆ ಮೂಲ ಯಾವುದು ಎಂಬುದನ್ನು ಮೊದಲಿಗೆ ಪತ್ತೆ ಹಚ್ಚಿ ಅದಕ್ಕೆ ಚಿಕಿತ್ಸೆ ಪ್ರಯೋಗಿಸುವ ಗುರಿಯನ್ನು ಇದು ಹೊಂದಿದೆ.ಮಧುಮೇಹ ವಂಶವಾಹಿಗಳಿಂದ ಬಂದರೆ ಅದು ವಂಶಪಾರಂಪರ್ಯವಾಗಿ ಹರಡುವುದು ಸರ್ವಸಾಮಾನ್ಯ. ಅದರಲ್ಲೂ 30ರಿಂದ 40 ವರ್ಷದ ವಯೋಮಾನದ ವರಲ್ಲಿ ಇಂದು ಜೀವನಶೈಲಿ ಕಾರಣಕ್ಕಾಗಿ ಇದು ಬೃಹದಾಕಾರ ರೂಪ ಪಡೆಯುತ್ತಿದೆ. ಅವರೂ ತಮ್ಮ ದೈನಂದಿನ ಚಟುವಟಿಕೆ ಮತ್ತು ಆಹಾರ ಬದಲಾವಣೆಗಳ ಮೂಲಕ ಸಾಕಷ್ಟು ಪ್ರಮಾಣದಲ್ಲಿ ಈ ಸಮಸ್ಯೆಯಿಂದ ಹೊರನುಸುಳಬಹುದು.

ಮತ್ತೊಂದೆಡೆ ಆಯುರ್ವೇದ ಪಂಚಕರ್ಮ ದಲ್ಲಿ ಇದಕ್ಕೆ ಸಾಕಷ್ಟು ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತಿದೆ. ದೈಹಿಕ ಶೋಧನೆ ಮೂಲಕ ಮೂಲವನ್ನು ಪತ್ತೆ ಹಚ್ಚಿ ಅದನ್ನು ಪಂಚಕರ್ಮ ಚಿಕಿತ್ಸೆಯಿಂದ ಸರಿಪಡಿಸಲಾಗುತ್ತದೆ. ರಸಾಯನ ದ್ರವ್ಯಗಳ ಪ್ರಯೋಗದ ಮೂಲಕ ಮಧುಮೇಹವನ್ನು ಗುಣಪಡಿಸಲಾಗುತ್ತಿದೆ. ಜೊತೆಗೆ ವಿಚಾರಲಹರಿಗಳ ವಿನಿಮಯದ ಮೂಲಕ ಭಾರತೀಯ ಸಂಸ್ಕೃತಿ ಯಯನ್ನು ಪರಿಣಾಮಕಾರಿಯಾಗಿ ಪ್ರಭಾವ ಬೀರುವಂತೆ ಮಾಡಲಾಗುತ್ತದೆ. ಇದರಿಂದ ಮಾನಸಿಕ ಸದೃಡತೆ ಸೃಷ್ಠಿಸಿ ಮಧುಮೇಹ ತಡೆಯುವುದು ಆಯುರ್ವೇದದ ಪ್ರಮುಖ ಉದ್ದೇಶ. ಹಾಗಾಗಿಯೇ ಇಂದು ಪಾಶ್ಚಾಮಾತ್ಯರು ಆಯುರ್ವೇದ ಚಿಕಿತ್ಸೆಯತ್ತ ಆಕರ್ಷಿತ ರಾಗಿದ್ದಾರೆ. ಆಯುರ್ವೇದ ಮುಂದಿನ ದಿನಗಳಲ್ಲಿ ಇಡೀ ವಿಶ್ವಕ್ಕೆ ಅನಿವಾರ್ಯ ವಾಗುವುದು ಖಚಿತ.

ಈ ನಿಟ್ಟಿನಲ್ಲಿ ರಾಜ್ಯಸರ್ಕಾರ, ಯುವಜನತೆ, ಸಂಘ ಸಂಸ್ಥೆಗಳು ಮತ್ತು ಎಲ್ಲರ ಸಹಕಾರ ತುಂಬಾ ಅಗತ್ಯ. ಆ ಮೂಲಕ ಎಲ್ಲರೂ ಆಯುರ್ವೇದದತ್ತ ತಮ್ಮ ಚಿತ್ತ ಹರಿಸೋಣ.ಲೈಂಗಿಕ ಮತ್ತು ನರದೌರ್ಬಲ್ಯ ಮಧುಮೇಹದ ಒಂದು ಪ್ರಮುಖ ಲಕ್ಷಣ. ಇದಕ್ಕೆ ಆಯುರ್ವೇದದಲ್ಲಿ ಪರಿಣಾಮಕಾರಿ ಚಿಕಿತ್ಸೆಗಳಿವೆ. ಅದಕ್ಕಾಗಿ ಆಯುರ್ವೇದ ಪರಿಣಿತ ವೈದ್ಯರನ್ನು ಸಂಪರ್ಕಿಸಿ ಸಲಹೆ ಸೂಚನೆ ಪಡೆದು ಮಧುಮೇಹದಿಂದ ಬಿಡುಗಡೆ ಪಡೆದು ಆರೋಗ್ಯಕರ ಹಾಗು ನೆಮ್ಮದಿಯ ಬದುಕು ತಮ್ಮದಾಗಿಸಿಕೊಳ್ಳಿ.

– ಡಾ. ಅಬ್ದುಲ್ ಖಾದರ್, ಆಯುರ್ವೇದ ತಜ್ಞ Ph : 08451 99790

Sri Raghav

Admin