ಇಒ ನಿರ್ಲಕ್ಷೆ ದೋರಣೆ ಖಂಡಿಸಿ ವಿಷದ ಬಾಟಲಿ ಹಿಡಿದು ಪ್ರತಿಭಟನೆ ಮಾಡಿದ ಕನಗನಮರಡಿ ಗ್ರಾಮಸ್ಥರು

pandavapura

ಪಾಂಡವಪುರ, ಮೇ 19– ತಾಲೂಕಿನ ಕನಗನಮರಡಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಅಕ್ರಮ ಕಾಂಪೌಂಡ್ ನಿರ್ಮಿಸಿಕೊಂಡು ಸಾರ್ವಜನಿಕರ ಸಂಚಾರ ರಸ್ತೆಗೆ ಅಡ್ಡಲಾಗಿ ಗುಂಡಿ ತೆಗೆದು ಅಡ್ಡಿ ಮಾಡುತ್ತಿರುವುದರಿಂದ ಸಾರ್ವಜನಿಕರ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸುವುದಾಗಿ ಭರವಸೆ ನೀಡಿದ್ದ ಇಒ ಮಂಜುನಾಥಸ್ವಾಮಿ ಇದೀಗ ಪಲಾಯನ ಮಾಡಿದ್ದಾರೆ ಎಂದು ಆರೋಪಿಸಿ ಕನಗನಮರಡಿ ಗ್ರಾಮಸ್ಥರು ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕಿ ವಿಷದ ಬಾಟಲಿ ಹಿಡಿದು ಪ್ರತಿಭಟನೆ ನಡೆಸಿದರು.ಪಟ್ಟಣದ ತಾಪಂ ಕಚೇರಿ ಮುಂದೆ ಧರಣಿ ನಡೆಸಿದ ಗ್ರಾಮಸ್ಥರು ತಾಪಂ ಇಒ ಎಚ್.ಎನ್.ಮಂಜುನಾಥಸ್ವಾಮಿ ಹಾಗೂ ಪಿಡಿಒ ನಟೇಶ್ ವಿರುದ್ಧ ಘೋಷಣೆ ಕೂಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ರಸ್ತೆ ವಿವಾದವನ್ನು ಶೀಘ್ರ ಇತ್ಯರ್ಥಪಡಿಸದಿದ್ದರೆ ಇಲ್ಲಿಯೇ ವಿಷ ಕುಡಿದು ನಾವೆಲ್ಲರೂ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.ಗ್ರಾಮದ ನಿವಾಸಿ ಕೆಂಪಮ್ಮ-ಜವರೇಗೌಡ ಎಂಬುವರು ಪಂಚಾಯಿತಿ ಖಾತೆ ಅಸೆಸ್‍ಮೆಂಟ್‍ನಲ್ಲಿ ಅಳತೆಗೂ ಹೆಚ್ಚುವರಿಯಾಗಿ 9 ಅಡಿಗಳಷ್ಟು ರಸ್ತೆಗೆ ಅಕ್ರಮವಾಗಿ ಕಾಂಪೌಂಡ್ ಹಾಕಿಕೊಂಡಿದ್ದಾರೆ. ಜತೆಗೆ 20 ಅಡಿ ಉದ್ದದ ರಸ್ತೆಗೆ ಅಡ್ಡಲಾಗಿ ಗುಂಡಿ ತೆಗೆದು ತೆಂಗಿನ ಗರಿಗಳನ್ನು ಅಡ್ಡಲಾಗಿ ಹಾಕಿದ್ದಾರೆ. ಇದರಿಂದ ರಸ್ತೆಯಲ್ಲಿ ಸಂಚಾರ ಮಾಡಲು ಬಹಳ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು.ಕಳೆದ 10 ವರ್ಷಗಳಿಂದಲೂ ಈ ರಸ್ತೆ ವಿವಾದ ಬಗೆಹರಿಸುವಲ್ಲಿ ಸ್ಥಳೀಯ ಗ್ರಾಪಂ ಹಾಗೂ ತಾಪಂ ವಿಫಲವಾಗಿದೆ. ರಸ್ತೆ ವಿವಾದ ಬಗೆಹರಿಸುವ ಸಂಬಂಧ ಗ್ರಾಪಂ ಹಾಗೂ ತಾಪಂ ಕಚೇರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಸಂಬಂಧ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ ಗ್ರಾಮದ ಜನರ ಸುಗಮ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಸಮಸ್ಯೆ ಬಗೆಹರಿಸದ ಹೊರತು ತಾವು ಇಲ್ಲಿಂದ ಜಾಗ ಬಿಟ್ಟು ಕದಲುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದು ಧರಣಿ ಕುಳಿತರಲ್ಲದೆ, ಪ್ರತಿಭಟನಾ ಸ್ಥಳದಲ್ಲಿಯೇ ಅಡುಗೆ ತಯಾರಿಸಿ ಊಟ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು. ಶೀಘ್ರವೇ ಸೂಕ್ತ ಕ್ರಮ ಕೈಗೊಂಡು ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡದಿದ್ದರೆ ನಿರಂತರ ಧರಣಿ ನಡೆಸಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಡಿ.ಹನಮಂತರಾಯಪ್ಪ ಪ್ರತಿಭಟನೆ ಕೈ ಬಿಡುವಂತೆ ಸಾಕಷ್ಟು ಮನವಿ ಮಾಡಿದರೂ ಪ್ರತಿಭಟನಾಕಾರರು ಪ್ರತಿಭಟನೆ ಮುಂದುವರೆಸಿದ್ದಾರೆ. ಜತೆಗೆ ತಡರಾತ್ರಿಯಾದರೂ ಪ್ರತಿಭಟನೆ ಮುಂದುವರೆದಿತ್ತು.
ಪ್ರತಿಭಟನೆಯಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಎಚ್. ಎನ್.ಮಂಜುನಾಥ್, ರೈತಸಂಘದ ಮುಖಂಡ ಕನಗನಮರಡಿ ಕೆ.ಬಲರಾಂ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಂಗಡಿ ನಾಗರಾಜು, ಡೇರಿ ಅಧ್ಯಕ್ಷ ಉಮೇಶ್, ಮೀನಾಕ್ಷಿ, ಚಂದ್ರಕಲಾ, ಗೀತಾ, ಸುಧಾ, ವೆಂಕಟರಾಮು, ರಾಮಶೆಟ್ಟಿ, ಯಜಮಾನ್ ಚನ್ನೇಗೌಡ, ಬೋರೇಗೌಡ, ರತ್ನಮ್ಮ, ನಾಗಮ್ಮ ಇತರರು ಹಾಜರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin