ಇಟಲಿಯಲ್ಲಿ 6.2 ತೀವ್ರತೆಯ ಭೂಕಂಪಕ್ಕೆ 100ಕ್ಕೂ ಹೆಚ್ಚು ಮಂದಿ ಸಾವು

Earth-1
ರೋಮ್, ಆ.24-ಇಟಲಿಯ ಮಧ್ಯ ಭಾಗದ ಮೇಲೆ ಇಂದು ಮುಂಜಾನೆ ಬಂದೆರಗಿದ ವಿನಾಶಕಾರಿ ಭೂಕಂಪದಿಂದ ಕನಿಷ್ಠ 100ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕ ಮಂದಿ ಗಾಯಗೊಂಡಿದ್ದಾರೆ. ಭೂಕಂಪನದ ರೌದ್ರಾವತಾರಕ್ಕೆ ಅನೇಕ ಕಟ್ಟಡಗಳು ಉರುಳಿಬಿದ್ದಿವೆ ಹಾಗೂ ಪರ್ವತಪ್ರದೇಶದ ಹಲವು ಹಳ್ಳಿಗಳು ನಾಶವಾಗಿದ್ದು, ಸಾವು-ನೋವು ಹೆಚ್ಚಾಗುವ ಆತಂಕವಿದೆ. ಸ್ಥಳೀಯ ಕಾಲಮಾನದ ಪ್ರಕಾರ ಇಂದು ಮುಂಜಾನೆ 3.30ರ ನಸುಕಿನಲ್ಲಿ ಮಧ್ಯ ಇಟಲಿಯ ಉಂಬ್ರಿಯ ಮತ್ತು ಲೀ ಮಾರ್ಚೆ ಪ್ರಾಂತ್ಯಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿತು.
ರಿಕ್ಟರ್ ಮಾಪಕದಲ್ಲಿ 6.2 ರಷ್ಟು ತೀವ್ರತೆ ಇದ್ದ ಭೂಕಂಪನದಿಂದ ಸಾವು-ನೋವು ಮತ್ತು ಅಪಾರಪ್ರಮಾಣದಲ್ಲಿ ಆಸ್ತಿಪಾಸ್ತಿ ನಷ್ಟವಾಗಿದೆ.  ಭೂಕಂಪನದ ಕೇಂದ್ರಬಿಂದುವಿದ್ದ ನೊರ್ಸಿಯಾ ಬಳಿ ಅನೇಕ ಕಟ್ಟಡಗಳು ಉರುಳಿಬಿದ್ದಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

Earth-2

ಈ ಭೂಕಂಪನದಿಂದ ತೀವ್ರತೆ ಎಷ್ಟಿತ್ತೆಂದರೆ 150 ಕಿಲೋಮೀಟರ್ ದೂರದಲ್ಲಿರುವ ರೋಮ್ನ ನಿವಾಸಿಗಳಿಗೂ ಭೂಮಿ ಕಂಪಿಸಿದ ಅನುಭವವಾಯಿತು.  ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ ಉಂಬ್ರಿಯ ಮತ್ತು ಲೀ ಮಾರ್ಚೆ ಪ್ರಾಂತ್ಯಗಳ ಜನರು ಆತಂಕಗೊಂಡು ಮನೆಗಳಿಂದ ಬೀದಿಗೆ ಓಡಿ ಬಂದರು. ಭೂಕಂಪನದ ಕೇಂದ್ರಬಿಂದು ರೋಮ್ನಿಂದ ಈಶಾನ್ಯ ಭಾಗಕ್ಕೆ ರೀಟಿ ಪ್ರದೇಶದಲ್ಲಿ ಇತ್ತು ಎಂದು ಯುರೋಪ್ ಮೆಡಿಟೆರಿಯನ್ ಸೇಸ್ ಮೊಲಾಜಿಕಲ್ ಸೆಂಟರ್ ಹೇಳಿದೆ. ಲೀ ಮಾರ್ಚೆ ಪ್ರದೇಶದ ಪೆಸ್ಕಾರಾ ಡೆಲ್ ಟ್ರೊಂಟೊದಲ್ಲಿ ಮನೆ ಕುಸಿದು ವೃದ್ಧ ದಂಪತಿ ಸಾವಿಗೀಡಾಗಿದ್ದಾರೆ. ಈ ಪ್ರದೇಶದಲ್ಲಿ ಉರುಳಿಬಿದ್ದ ಕಟ್ಟಡಗಳ ಅವಶೇಷಗಡಿ ಅನೇಕರು ಸಿಲುಕಿದ್ದಾರೆ. ಭೂಕಂಪ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್ ಮತ್ತು ದೂರವಾಣಿ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳು ಸಮರೋಪಾದಿಯಲ್ಲಿ ಸಾಗಿದ್ದು, ಸಾವು-ನೋವು ಇನ್ನಷ್ಟು ಹೆಚ್ಚಾಗುವ ಆತಂಕವಿದೆ.

Earth-3

► Follow us on –  Facebook / Twitter  / Google+

Sri Raghav

Admin