ಇಟಲಿಯ ಕಲಾವಿದ ಗೈಡೋ ಡೆನೀಲೆ ಅನಿಮಲ್ ಪ್ರಿಂಟ್ ಬಾಡಿ ಪೇಟಿಂಗ್ ಕೈಚಳಕ
ಕಲೆ ಎಂಬುದು ಸಾಗರ ಇದ್ದಂತೆ. ಪ್ರತಿಭೆ ಮತ್ತು ಸಾಮಥ್ರ್ಯ ಇದ್ದರೆ ಕೈಗಳ ಕಲಾ ಚಮತ್ಕಾರಕ್ಕೆ ಇತಿಮಿತಿ ಗಳಿಲ್ಲ. ಇದಕ್ಕೆ ನಿದರ್ಶನ ಇಟಲಿಯ ಕಲಾವಿದ ಗೈಡೋ ಡೆನೀಲೆ. ಈತ ತನ್ನ ಕೈಗಳಿಂದ ಅನಿಮಲ್ ಪ್ರಿಂಟ್ ಬಾಡಿ ಪೇಟಿಂಗ್ ವಿಶಿಷ್ಟ ಕೈಚಳಕ ಪ್ರದರ್ಶಿಸಿದ್ದಾನೆ. ಇದನ್ನು ಹ್ಯಾಂಡಿಮಲ್ (ಕೈಯಲ್ಲಿ ಕಾಣುವ ಪ್ರಾಣಿ) ಎನ್ನುತ್ತಾರೆ. ಗೈಡೋ ಒಬ್ಬ ಪ್ರತಿಭಾವಂತ ಕಲಾವಿದ. ಅತ ಪ್ರಾಣಿ ಯಂತೆ ಕಾಣುವ ಚಿತ್ರವನ್ನು ದೇಹದ ಮೇಲೆ ಬಣ್ಣ ತುಂಬುವಂತೆ ಮಾಡುವಲ್ಲಿ ನಿಷ್ಣಾತ. ಇಟಲಿಯ ಈ ಕಲಾವಿದನಿಗೆ ಮಾನವನ ಕೈಗಳೇ ಆತನ ಕ್ಯಾನ್ವಾಸ್.
ಅಪಾಯದ ಅಂಚಿನಲ್ಲಿರುವ ಮತ್ತು ಅವನತಿಯ ಭೀತಿಯಲ್ಲಿರುವ ಪಶು-ಪಕ್ಷಿಗಳ ಬಗ್ಗೆ ಜಾಗೃತಿ ಮೂಡಿಸುವುದು ತನ್ನ ಕಲೆಯ ಉದ್ದೇಶ ಎನ್ನುತ್ತಾನೆ ಗೈಡೋ. ಕೈಗಳ ಮೇಲೆ ಪ್ರಾಣಿಗಳು ಅಂದರೆ ಕೈಗೆ ಪ್ರಾಣಿಯನ್ನು ನೀಡುವುದು ಎಂದರ್ಥ. ಅಂದರೆ ಪ್ರಾಣಿಗಳ ರಕ್ಷಣೆಗೆ ಕೈಗಳನ್ನು ಕೊಡಿ ಎಂಬುದು ನನ್ನ ಕಲೆಯ ಸಂದೇಶ ಎಂದು ತನ್ನ ಕಲಾ ಪ್ರದರ್ಶನದ ವೇಳೆ ಗೈಡೋ ಹೇಳುತ್ತಾನೆ. ಕಲಾವಿದರು ತಮ್ಮ ಕಲೆಯ ಮೂಲಕ ಒಂದು ಸಂದೇಶವನ್ನು ನೀಡುವ ಅವಕಾಶ ಪಡೆದಿದ್ದಾರೆ. ಪ್ರಕೃತಿಯನ್ನು ಉಳಿಸಿ, ಪ್ರಾಣಿಗಳನ್ನು ರಕ್ಷಿಸಿ, ಅವುಗಳನ್ನು ನಾಶ ಮಾಡಬೇಡಿ ಎಂಬುದು ನನ್ನ ಸಂದೇಶವಾಗಿದೆ. ಹೀಗಾಗಿ ನಾನು ನನ್ನ ಸಂಶೋಧನೆಯನ್ನು ಮಾಡುತ್ತಿದ್ದೇನೆ. ನನ್ನ ಜೀವನಕ್ಕಾಗಿ ನನ್ನ ಸಂದೇಶವನ್ನು ನಾನು ನೀಡುತ್ತಿದ್ದೇನೆ.
ಇದಕ್ಕಿಂತ ನಾನು ಹೆಚ್ಚಿಗೆ ಮಾಡಲು ಸಾಧ್ಯವಿಲ್ಲ ಎಂದು ಈ ಕಲಾವಿದ ಹೇಳಿದ್ದಾನೆ. ಬಾಲ್ಯದಿಂದಲೂ ಗೈಡೋ ಕಲೆಗಳನ್ನು ಸೃಷ್ಟಿಸುತ್ತಿದ್ದಾನೆ. ಕಳೆದ 15 ವರ್ಷಗಳಿಂದ ಈತ ಕೈಗಳ ಮೇಲೆ ಬಣ್ಣ ಬಳಿಯುವ ಹ್ಯಾಂಡ್ ಪೇಟಿಂಗ್ ಕಲೆಯನ್ನು ಕರಗತ ಮಾಡಿಕೊಂಡಿದ್ದಾನೆ. ಮುಖದ ನಂತರ ಕೈಗಳು ದೇಹದಲ್ಲಿ ಬಹು ಮುಖ್ಯ ಭಾಗವಾಗಿದೆ ಎನ್ನುವ ಗೈಡೋ, ಅಮೆರಿಕ ಸೇರಿದಂತೆ ಅನೇಕ ದೇಶಗಳಲ್ಲಿ ತನ್ನ ಕಲಾ ಸಾಮಥ್ರ್ಯವನ್ನು ಪ್ರದರ್ಶಿಸಿ ಸೈ ಅನಿಸಿಕೊಂಡಿದ್ಧಾನೆ. ಹ್ಯಾಂಡಿಮಲ್ಸ್ ಹೆಸರಿನ ಈ ಕಲಾ ಪ್ರದರ್ಶನವು ಗೈಡೋನ 24 ಬೃಹತ್ ಪ್ರಮಾಣದ ಛಾಯಾಚಿತ್ರಗಳನ್ನೂ ಒಳಗೊಂಡಿದೆ. ಝೀಬ್ರಾ, ಆನೆ, ಸರಿಸೃಪಗಳು ಮತ್ತು ಪಕ್ಷಿಗಳನ್ನು ಪ್ರತಿಬಿಂಬಿಸುವ ಹ್ಯಾಂಡಿಮಲ್ಸ್ನಂಥ ಫೋಟೋಗಳೂ ಇದರಲ್ಲಿವೆ.
< Eesanje News 24/7 ನ್ಯೂಸ್ ಆ್ಯಪ್ >