ಇದ್ದಕ್ಕಿದ್ದಂತೆ ಹೊತ್ತಿ ಉರಿದ ಮಾರುತಿ 800 ಕಾರ್

Car-Fire--01

ಬೆಂಗಳೂರು, ಸೆ.29-ಬೆಂಗಳೂರಿನಿಂದ ಬಳ್ಳಾರಿಗೆ ಹೋಗುತ್ತಿದ್ದ ಮಾರುತಿ 800 ಕಾರಿನಲ್ಲಿ ಇದ್ದಕ್ಕಿದ್ದ ಹಾಗೆ ಹೊಗೆ ಕಾಣಿಸಿಕೊಂಡು ಸಂಪೂರ್ಣ ಹಾನಿಯಾಗಿರುವ ಘಟನೆ ದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಮಾರತ್‍ಹಳ್ಳಿಯ ಜಗದೀಶ್ ಎಂಬುವರಿಗೆ ಸೇರಿದ ಈ ಕಾರಿನಲ್ಲಿ ನಾಲ್ವರು ಬಳ್ಳಾರಿಗೆ ಪ್ರಯಾಣಿಸುತ್ತಿದ್ದರು. ಬೆಳಗ್ಗೆ 9 ಗಂಟೆಯಲ್ಲಿ ಕಾರು ದೇವನಹಳ್ಳಿ ವ್ಯಾಪ್ತಿಯ ನವಯುಗ ಟೋಲ್ ಪ್ಲಾಜಾ ಬಳಿ ಬರುತ್ತಿದ್ದಂತೆ ಕಾರಿನಲ್ಲಿ ಇದ್ದಕ್ಕಿದ್ದಂತೆ ಹೊಗೆ ಕಾಣಿಸಿಕೊಂಡಿದೆ.

ತಕ್ಷಣ ಜಾಗೃತರಾಗಿ ಕಾರನ್ನು ರಸ್ತೆ ಬದಿ ನಿಲ್ಲಿಸಿ ಎಲ್ಲರೂ ಕೆಳಗಿಳಿದಿದ್ದಾರೆ. ನೋಡನೋಡುತ್ತಿದ್ದಂತೆ ಇಂಜಿನ್‍ನಿಂದ ಹೊಗೆ ಆವರಿಸಿ ಬೆಂಕಿ ಹೊತ್ತಿಕೊಂಡಿದೆ. ತಕ್ಷಣ ಅಗ್ನಿಶಾಮಕದಳಕ್ಕೆ ವಿಷಯ ತಿಳಿಸಿದ್ದು, ಅಗ್ನಿಶಾಮಕ ವಾಹನದೊಂದಿಗೆ ಆಗಮಿಸಿದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದು, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಈ ಸಂಬಂಧ ದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

Sri Raghav

Admin