ಇನ್ಮುಂದೆ ಹೆದ್ದಾರಿ ಪಕ್ಕದಲ್ಲಿ ವಾಹನ ನಿಲ್ಲಿಸಿದರೆ ದಂಡ ಬೀಳುತ್ತೆ ಹುಷಾರ್..!

Lorry-01
ನವದೆಹಲಿ, ಜ.6- ಇನ್ನು ಮುಂದೆ ಎಲ್ಲೆಂದ ರಲ್ಲಿ ವಾಹನಗಳನ್ನು ನಿಲ್ಲಿಸೀರಿ ಜೋಕೆ…! ಹಾಗೊಂದು ವೇಳೆ ಪಾರ್ಕಿಂಗ್ ಇಲ್ಲದ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸಿದರೆ ಜೇಬಿಗೆ ಕತ್ತರಿ ಬೀಳುವುದು ಗ್ಯಾರಂಟಿ.  ಕಾರಣ ಕೇಂದ್ರ ಸರ್ಕಾರ ಹೊಸ ಕಾಯ್ದೆಯನ್ನು ಜಾರಿ ಮಾಡಲು ಮುಂದಾಗಿದೆ.ಇನ್ನು ಮುಂದೆ ಯಾರಾದರೂ ಕಂಡಕಂಡಲ್ಲಿ ಇಲ್ಲವೆ, ಸಾರ್ವಜನಿಕ ಸ್ಥಳ, ಹೆದ್ದಾರಿ ಅಕ್ಕಪಕ್ಕಗಳಲ್ಲಿ ವಾಹನಗಳನ್ನು ನಿಲ್ಲಿಸಿರುವುದು ಕಂಡು ಬಂದರೆ ಸಾರ್ವಜನಿಕರು ಮಾಡಬೇಕಾದ್ದು ಇಷ್ಟೆ. ಇಂತಹ ವಾಹನಗಳನ್ನು ಜನರು ತಮ್ಮ ಮೊಬೈಲ್‍ನಲ್ಲಿ ಕ್ಲಿಕ್ಕಿಸಿ ವಾಟ್ಸಪ್ ಮೂಲಕ ಸಂಬಂಧಪಟ್ಟವರಿಗೆ ಕಳುಹಿಸಿದರೆ 100 ರೂ. ಬಹುಮಾನ ದೊರೆಯಲಿದೆ.

ಇದಕ್ಕಾಗಿ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಹೊಸ ಕಾಯ್ದೆ ಜಾರಿ ಮಾಡಲು ತೀರ್ಮಾನಿಸಿದ್ದಾರೆ.  ಮುಂದಿನ ಸಚಿವ ಸಂಪುಟದಲ್ಲಿ ಇದರ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಅವೇಶನದಲ್ಲಿ ಕಾಯ್ದೆ ಜಾರಿ ಮಾಡುವುದು ನಮ್ಮ ಉದ್ದೇಶ ಎಂದು ಗಡ್ಕರಿ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.  ಇತ್ತೀಚಿನ ದಿನಗಳಲ್ಲಿ ಹೆದ್ದಾರಿ, ನಗರದ ಮಧ್ಯಭಾಗ, ಸಾರ್ವಜನಿಕ ಸ್ಥಳಗಳಲ್ಲಿ ವಾಹನ ಸವಾರರು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಅಪಘಾತಗಳು ಹೆಚ್ಚಾಗುವುದರ ಜೊತೆಗೆ ಪಾದಚಾರಿಗಳಿಗೆ ಕಿರಿಕಿರಿ ಉಂಟಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಹಾಲಿ ಇರುವ ಕಾಯ್ದೆಗೆ ತಿದ್ದುಪಡಿ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

ಮಹಾನಗರ, ನಗರ ಪ್ರದೇಶಗಳು ಮತ್ತು ಪಟ್ಟಣ ಪ್ರದೇಶ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಡೆ ಯಾರಾದರೂ ವಾಹನ ನಿಲುಗಡೆ ಮಾಡಿದರೆ ಒಂದು ಸಾವಿರ ರೂ. ದಂಡ ವಿಸಲಾಗುವುದು. ಸಾರ್ವಜನಿಕರು ತಮ್ಮ ಮೊಬೈಲ್‍ನಲ್ಲಿ ವಾಟ್ಸಪ್ ಮೂಲಕ ಇಂತಹ ಚಿತ್ರಗಳನ್ನು ಪೊಲೀಸ್ ಠಾಣೆ, ಸಾರಿಗೆ ಇಲಾಖೆ ಸೇರಿದಂತೆ ಮತ್ತಿತರ ಸಂಬಂಧಪಟ್ಟ ಇಲಾಖೆಗೆ ಕಳುಹಿಸಿದರೆ ಅವರ ಹೆಸರನ್ನು ಗೌಪ್ಯವಾಗಿಟ್ಟು 100 ರೂ. ಬಹುಮಾನ ನೀಡಲಾಗುವುದು ಗಡ್ಕರಿ ಹೇಳಿದ್ದಾರೆ.  ಮೊದಲು ಪ್ರಯೋಗಿಕವಾಗಿ ದೇಶದ ಮಹಾನಗರಗಳಲ್ಲಿ ಇದನ್ನು ಜಾರಿಗೊಳಿಸಲಾಗುವುದು, ಯಶಸ್ವಿಯಾದರೆ ದೇಶದೆಲ್ಲೆಡೆ ಅನುಷ್ಠಾನ ಮಾಡಲಾಗುವುದು. ಅಪಘಾತ ತಡೆಯುವುದರ ಜೊತೆಗೆ ಸಾರ್ವಜನಿಕರಿಗೆ ತೊಂದರೆ ತಪ್ಪಿಸುವುದು ಇದರ ಮೂಲ ಉದ್ದೇಶವಾಗಿದೆ ಎಂದಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin