ಇಸ್ಕಾನ್ ನ ‘200 ಕೋಟಿ ಊಟ’ದ ಸಮಾರಂಭಕ್ಕೆ ರಾಷ್ಟ್ರಪತಿ ಪ್ರಣಬ್
ಬೆಂಗಳೂರು, ಆ.27-ಪ್ರಸ್ತುತ ದೇಶದ 10 ರಾಜ್ಯಗಳ 27 ಸ್ಥಳಗಳಲ್ಲಿ 13,210 ಶಾಲೆಗಳ 15.2 ಲಕ್ಷ ಮಕ್ಕಳಿಗೆ ಪ್ರತಿನಿತ್ಯ ಬಿಸಿಯೂಟ ನೀಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರಮುಖ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಅನುಷ್ಠಾನದ ಸಹವರ್ತಿಯಾದ ಅಕ್ಷಯ ಪಾತ್ರೆ ಪ್ರತಿಷ್ಠಾನದ ಐತಿಹಾಸಿಕ ಮೈಲಿಗಲ್ಲು ‘200 ಕೋಟಿ ಊಟ’ದ ಸಮಾರಂಭವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಇಂದು ಸಂಜೆ ನಗರದ ಇಸ್ಕಾನ್ನಲ್ಲಿ ಸಾಕ್ಷೀಕರಿಸಲಿದ್ದಾರೆ. ಕಳೆದ 2000ರಿಂದ 2016ರವರೆಗೆ ಸತತವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಾ ಬಂದಿರುವ ಅಕ್ಷಯ ಪಾತ್ರೆ ಫೌಂಡೇಷನ್ ಇಂದು 200 ಕೋಟಿ ಊಟ ವಿತರಿಸುವ ಸವಿನೆನಪಿಗೆ ಕಾರ್ಯಕ್ರಮವನ್ನು ಆಯೋಜಿಸಿದೆ.
ರಾಷ್ಟ್ರಪತಿಗಳ ಜೊತೆ ರಾಜ್ಯಪಾಲ ವಾಜು ಬಾಯಿ ರೂಢಾಬಾಯಿ ವಾಲ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಪ್ರಕಾಶ್ ಜಾವೇಡ್ಕರ್, ಸದಾನಂದಗೌಡ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್, ಕೇಂದ್ರದ ಮಾಜಿ ಸಚಿವ ಮುರುಳಿ ಮನೋಹರ್ ಜೋಷಿ, ಮೇಯರ್ ಮಂಜುನಾಥ್ ರೆಡ್ಡಿ , ಶಾಸಕರಾದ ಕೆ.ಗೋಪಾಲಯ್ಯ, ಪಾಲಿಕೆ ಸದಸ್ಯ ಬದ್ರೇಗೌಡ, ಇನೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾದ ಸುಧಾಮೂರ್ತಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಮಧುಪಂಡಿತ್ ದಾಸ್ ತಿಳಿಸಿದ್ದಾರೆ.
25 ಕೇಂದ್ರೀಯ ಅಡುಗೆ ಮನೆಗಳ ನಿರ್ಮಾಣ ಮತ್ತು ಸಹಾಯಧನವನ್ನು ಮೀರಿದ ಖರ್ಚನ್ನು ತುಂಬಲು ನೆರವಾದ ಪ್ರತಿಷ್ಠಾನಗಳು ಕಾರ್ಪೋರೇಟ್ ಮತ್ತು ವೈಯಕ್ತಿಕ ದಾನಿಗಳನ್ನು ಈ ಸಂದರ್ಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರು ಸ್ಮರಿಸಿದರು.
► Follow us on – Facebook / Twitter / Google+