ಇಸ್ಲಾಂ ಉಗ್ರರನ್ನು ದೂರವಿಡುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ

Spread the love

Trump-01

ವಾಷಿಂಗ್ಟನ್, ಜ.28-ದೇಶದಿಂದ ಇಸ್ಲಾಂ ಮೂಲಭೂತವಾದಿ ಭಯೋತ್ಪಾದಕರನ್ನು ದೂರವಿಡುವ ಹಾಗೂ ನಿರಾತ್ರಿತರ ವಲಸೆಯನ್ನು ನಿಯಂತ್ರಿಸಲು ನೆರವಾಗುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಸಹಿ ಮಾಡಿದ್ದಾರೆ. ವಿಶ್ವಕ್ಕೆ ಕಂಟಕಪ್ರಾಯವಾಗಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರಗಾಮಿಗಳೂ ಸೇರಿದಂತೆ ಏಳು ಮುಸ್ಲಿಂ ರಾಷ್ಟ್ರಗಳ ಭಯೋತ್ಪಾದಕರ ನಿಗ್ರಹಕ್ಕೆ ಟ್ರಂಪ್ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಇಸ್ಲಾಂ ಪ್ರಧಾನ ರಾಷ್ಟ್ರಗಳಾದ ಇರಾನ್, ಇರಾಕ್, ಲಿಬಿಯಾ, ಸೋಮಾಲಿಯಾ, ಸೂಡಾನ್, ಸಿರಿಯಾ ಮತ್ತು ಯೆಮೆನ್ ಈ ದೇಶಗಳ ಉಗ್ರರನ್ನು ಅಮೆರಿಕದಿಂದ ಹೊರಗಿಡುವ ಆದೇಶಕ್ಕೆ ಸಹಿ ಹಾಕುವ ಮೂಲಕ ಟ್ರಂಪ್ ಇಸ್ಲಾಂ ದೇಶಗಳ ಭಯೋತ್ಪಾದಕರು ಮತ್ತು ಭಯೋತ್ಪಾದನೆ ಚಟುವಟಿಕೆಗೆ ಭಾರೀ ಪೆಟ್ಟು ನೀಡಿದ್ದಾರೆ ಎಂದು ಅಮೆರಿಕದ ಮಿತ್ರರಾಷ್ಟ್ರಗಳು ಬಣ್ಣಿಸಿವೆ.
ಅಮೆರಿಕ ಅಧ್ಯಕ್ಷರಾದ ನಂತರ ರಕ್ಷಣಾ ಇಲಾಖೆ-ಪೆಂಟಗನ್‍ಗೆ ಪ್ರಥಮ ಬಾರಿಗೆ ಭೇಟಿ ನೀಡಿ ಈ ಆದೇಶಕ್ಕೆ ಟ್ರಂಪ್ ಸಹಿ ಮಾಡಿದ್ದಾರೆ.. ಅಮೆರಿಕ ಸಂಯುಕ್ತ ಸಂಸ್ಥಾನದಿಂದ ಇಸ್ಲಾಂ ಮೂಲಭೂತವಾದಿ ಭಯೋತ್ಪಾದಕರನ್ನು ಹೊರಗಿಡುವ ಹೊಸ ಕಠಿಣ ಕ್ರಮಗಳಿಗೆ ನಾನು ಚಾಲನೆ ನೀಡುತ್ತಿದ್ದೇನೆ. ಉಗ್ರರು ಇಲ್ಲಿರುವುದು ನಮಗೆ ಬೇಕಿಲ್ಲ ಎಂದು ತಿಳಿಸಿದ್ದಾರೆ.

ಅಮೆರಿಕದಲ್ಲಿ 9/11ರಂದು ನಡೆದ ದಾಳಿ ಹಾಗೂ ಪೆಂಟಗನ್‍ನಲ್ಲಿ ಪ್ರಾಣ ಕಳೆದುಕೊಂಡ ನಮ್ಮ ಯೋಧರನ್ನು ನಾವು ಎಂದೂ ಮರೆಯುವುದಿಲ್ಲ. ನಾವು ಅವರನ್ನು ಗೌರವಿಸುತ್ತೇವೆ. ಇದನ್ನು ಕೇವಲ ಪದಗಳಲ್ಲಿ ಮಾತ್ರವಲ್ಲ ಕ್ರಿಯೆಗಳ ಮೂಲಕವೂ ನಾವು ಅನುಷ್ಠಾನಗೊಳಿಸುತ್ತೇವೆ. ಇಂದು ನಾವು ಇದನ್ನೇ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ಸೇನಾ ಮರುನಿರ್ಮಾಣಕ್ಕೆ ಅವಕಾಶ ನೀಡುವ ಅಧಿಕೃತ ಆದೇಶಕ್ಕೂ ಸಹ ಟ್ರಂಪ್ ಸಹಿ ಮಾಡಿದ್ದಾರೆ. ಈ ಮೂಲಕ ಅಮೆರಿಕದ ರಕ್ಷಣಾ ಇಲಾಖೆಗೆ ಹೊಸ ಯುದ್ಧ ವಿಮಾನಗಳು ಮತ್ತು ನೌಕೆಗಳು ಸೇರ್ಪಡೆಯಾಗಿ, ಸಂಪನ್ಮೂಲಗಳನ್ನು ಅಭಿವೃದ್ದಿಗೊಳಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin