ಈರುಳ್ಳಿ ಖರೀದಿ ಕೇಂದ್ರ ಸ್ಥಾಪಿಸಿ ಕೆಜಿಗೆ 15ರೂ. ಬೆಂಬಲ ಬೆಲೆ ನೀಡಿ

Onion

ಶಿವಮೊಗ್ಗ, ಅ.7- ಈರುಳ್ಳಿ ಬೆಳೆಗಾರರು ಬೆಲೆ ಸಿಗದೆ ಅತಂತ್ರರಾಗಿದ್ದು, ಕೆಜಿಗೆ 15ರೂ. ಬೆಂಬಲ ಬೆಲೆ ನೀಡಿ ಖರೀದಿಸಬೇಕೆಂದು ಶಾಸಕ ಸಿ.ಟಿ.ರವಿ ಒತ್ತಾಯಿಸಿದ್ದಾರೆ. ಕೃಷಿ ಬೆಲೆ ಆಯೋಗ ಈ ಕುರಿತು ಗಮನ ಹರಿಸಿ ತಕ್ಷಣವೇ ಈರುಳ್ಳಿ ಖರೀದಿ ಕೇಂದ್ರ ಸ್ಥಾಪಿಸಿ ರೈತರ ನೆರವಿಗೆ ಬರಬೇಕೆಂದು ಸಿ.ಟಿ.ರವಿ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗ, ರಾಣೆಬೆನ್ನೂರು, ಕಡೂರು, ತರಿಕೆರೆ, ಗದಗ ಮುಂತಾದ ಕಡೆ ಈರುಳ್ಳಿ ಬೆಳೆದಿರುವ ಬೆಳೆಗಾರರು ಬೆಲೆ ಸಿಗದೆ ಕಂಗಾಲಾಗಿದ್ದಾರೆ.  ಬೆಂಬಲ ಬೆಲೆ ನೀಡಿ ಸರ್ಕಾರ ಈರುಳ್ಳಿಯನ್ನು ಖರೀದಿಸಿ ಅವರ ನೆರವಿಗೆ ಧಾವಿಸಬೇಕು. ಬೆಲೆ ಇಲ್ಲದೆ ಅತಂತ್ರರಾಗಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದರು. ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆರಂಭದಲ್ಲೇ ರಾಜ್ಯ ಸರ್ಕಾರ 10 ಸಾವಿರ ಕ್ಯೂಸೆಕ್ ನೀರು ಬಿಡಲು ಒಪ್ಪಿದ ಕಾರಣ ಕೇಂದ್ರ ಮಧ್ಯ ಪ್ರವೇಶಿಸಲು ಸಾಧ್ಯವಾಗಲಿಲ್ಲ.

ವಿನಾಕಾರಣ ಕಾವೇರಿ ವಿವಾದದಲ್ಲಿ ಕೇಂದ್ರದ ಮೇಲೆ ಅಪಪ್ರಚಾರ ನಡೆಯುತ್ತಿದೆ ಎಂದು ಸಿ.ಟಿ.ರವಿ ಆರೋಪಿಸಿದರು. ರಾಜಕೀಯಕ್ಕಾಗಿ ಬಿಜೆಪಿ ಸಂಸದರು ರಾಜ್ಯದ ಹಿತವನ್ನು ಯಾವತ್ತೂ ಬಲಿ ಕೊಡುವುದಿಲ್ಲ. ರಾಜ್ಯದ ಹಿತ ಕಾಪಾಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.  ರಾಷ್ಟ್ರೀಯ ಜಲನೀತಿ ಹಾಗೂ ಇಸ್ರೇಲ್ ಮಾದರಿಯ ವೈಜ್ಞಾನಿಕ ಕೃಷಿ ನೀತಿ ಜಾರಿಯಾಗಬೇಕೆಂದು ಅವರು ಹೇಳಿದರು.  104 ತಾಲೂಕುಗಳನ್ನು ಸರ್ಕಾರ ಬರ ಪೀಡಿತ ಎಂದು ಘೋಷಿಸಿದೆ. ಆದರೆ, ಕುಡಿಯುವ ನೀರಿನ ಕಾಮಗಾರಿಗೆ ಈವರೆಗೆ ಹಣ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ರಾಜ್ಯದ ಆದಾಯ ಸೋರಿಕೆಯಾಗಿದೆ. ಬಡವರ ಅಂತ್ಯ ಸಂಸ್ಕಾರಕ್ಕೂ ಹಣ ಬಿಡುಗಡೆ ಮಾಡಿಲ್ಲ ಎಂದು ಗಂಭೀರ ಆರೋಪ ಮಾಡಿದ ಅವರು, ಸರ್ಕಾರ ಕೂಡಲೇ ಶ್ವೇತಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು. ರಾಜ್ಯ ಸರ್ಕಾರದ ಹಣದ ಕೊರತೆಯಿಂದ ಆಡಳಿತ ವೈಫಲ್ಯ ಕಾಣುತ್ತಿದೆ ಎಂದರು.

► Follow us on –  Facebook / Twitter  / Google+

Sri Raghav

Admin