ಈಶ್ವರಪ್ಪ ಕರ್ನಾಟಕದ ಮುಂದಿನ ಮುಖ್ಯಮಂತ್ರಿ..!
ಬೆಂಗಳೂರು, ಜ.6- ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಎಂದು ಅವರ ಬೆಂಬಲಿಗರು ಕರಪತ್ರ ಮುದ್ರಿಸಿ ಹಂಚುವ ಮೂಲಕ ಮತ್ತೊಮ್ಮೆ ಈಶ್ವರಪ್ಪ ಅವರು ಹೈಕಮಾಂಡ್ಗೆ ಸೆಡ್ಡು ಹೊಡೆಯುವ ಮುನ್ಸೂಚನೆ ನೀಡಿದ್ದಾರೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕು ಬಿಜೆಪಿ ಬೆಂಬಲಿಗರಿಂದ ಭಿತ್ತಿ ಪತ್ರ ಹೊರಡಿಸಲಾಗಿದ್ದು, ಬಿಜೆಪಿ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಉಂಟು ಮಾಡಿದ್ದಾರೆ. ಇದಕ್ಕೂ ಮುನ್ನ ಸಂಗೊಳ್ಳಿರಾಯಣ್ಣ ಬ್ರಿಗೇಡ್ ನಿಲ್ಲಿಸಬೇಕೆಂದು ಪಕ್ಷದ ವರಿಷ್ಠರು ಸೂಚಿಸಿದ್ದರೂ ಸಹ ತಾಯಿ ಮೇಲೆ ಆಣೆ ಬ್ರಿಗೇಡ್ ನಿಲ್ಲಿಸುವುದಿಲ್ಲ. ಆ ಮೂಲಕ ಬಡವರ, ಶೋಷಿತರ ಪರ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ಈಶ್ವರಪ್ಪನವರು ವರಿಷ್ಠರಿಗೆ ಸೆಡ್ಡು ಹೊಡೆದಿದ್ದರು.
ಇದೀಗ ಮುಂದಿನ ಬಿಜೆಪಿ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರು ಎಂದು ಬೆಂಬಲಿಗರು ಅರಸೀಕೆರೆಯಲ್ಲಿ ಕರಪತ್ರ ಹೊರಡಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದುವರೆಗೂ ಬಿ.ಎಸ್.ಯಡಿಯೂರಪ್ಪನವರೇ ನಮ್ಮ ಮುಖ್ಯಮಂತ್ರಿ ಎಂದು ಹೇಳುತ್ತಿದ್ದ ಈಶ್ವರಪ್ಪ, ಇದೀಗ ಬೆಂಬಲಿಗರ ಮೂಲಕ ತಾವೇ ಮುಂದಿನ ಸಿಎಂ ಎಂದು ಹೇಳಿಸಿ ಪರೋಕ್ಷವಾಗಿ ಸಿಡಿದೇಳುವ ಮುನ್ಸೂಚನೆ ನೀಡಿದ್ದಾರೆ.