ಈ ಕಾಲದಲ್ಲೂ ಇಂತಹ ಒಳ್ಳೆಯವರು ಇರ್ತಾರಾ..?

Polic-e02

ತುಮಕೂರು, ಅ.3- ರೈಲಿಗೆ ಹತ್ತುವ ಭರದಲ್ಲಿ ಆಭರಣಗಳಿದ್ದ ಬ್ಯಾಗನ್ನು ಮಹಿಳೆಗೆ ತಲುಪಿಸಿ ಸ್ಥಳೀಯ ರೈಲ್ವೆ ಪೊಲೀಸರು ಪ್ರಾಮಾಣಿಕತೆ ಮೆರೆದಿದ್ದಾರೆ. ತುಮಕೂರಿನ ಬಂಡೆಪಾಳ್ಯದ ನಿವಾಸಿ ಸವೀನಾ ಎಂಬುವರು ಇಂದು ಬೆಳಗ್ಗೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೋಗುವ ರೈಲಿನಲ್ಲಿ ಪ್ರಯಾಣಿಸಲು ರೈಲಿಗಾಗಿ ಕಾಯುತ್ತಿದ್ದರು.

ಈ ವೇಳೆ ಇವರ ಬಳಿ ಎರಡು ಬ್ಯಾಗ್‍ಗಳಿದ್ದವು. ಒಂದು ಬ್ಯಾಗನ್ನು ರೈಲ್ವೆ ನಿಲ್ದಾಣದಲ್ಲಿ ಬೆಂಚ್ ಮೇಲೆ ಇಟ್ಟು ಮತ್ತೊಂದು ಬ್ಯಾಗನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ರೈಲು ನಿಲ್ದಾಣಕ್ಕೆ ಬರುತ್ತಿದ್ದಂತೆ ಈ ಮಹಿಳೆ ಅವಸರವಾಗಿ ಬೆಂಚ್ ಮೇಲೆ ಇಟ್ಟಿದ್ದ ಬ್ಯಾಗನ್ನು ಮರೆತು ರೈಲು ಹತ್ತಿದ್ದಾರೆ. ರೈಲು ಹೋದ ನಂತರ ರೈಲ್ವೆ ಇನ್ಸ್‍ಪೆಕ್ಟರ್ ಕುಬೇಂದ್ರಪ್ಪ ಅವರು ನಿಲ್ದಾಣವನ್ನು ಪರಿಶೀಲಿಸುತ್ತಿದ್ದಾಗ ಬೆಂಚ್ ಮೇಲೆ ವ್ಯಾನಿಟಿ ಬ್ಯಾಗ್ ಇದ್ದುದನ್ನು ಗಮನಿಸಿದ್ದಾರೆ.

ಅದನ್ನು ತಮ್ಮ ವಶಕ್ಕೆ ತೆಗೆದುಕೊಂಡು ನೋಡಿದಾಗ ಅದರಲ್ಲಿ ಚಿನ್ನದ ನೆಕ್ಲೇಸ್, ಓಲೆ, 7 ಸಾವಿರ ಹಣ, ಒಂದು ವಾಚ್ ಹಾಗೂ ಇನ್ನಿತರ ವಸ್ತುಗಳು ಇರುವುದು ಕಂಡುಬಂದಿದೆ. ತುಮಕೂರಿನಿಂದ ರೈಲು ಹತ್ತಿದ ಮಹಿಳೆ ಕೆಲ ಸಮಯದ ಬಳಿಕ ನೋಡಿಕೊಂಡಾಗ ಬ್ಯಾಗ್ ನಿಲ್ದಾಣದಲ್ಲೇ ಬಿಟ್ಟುಬಂದಿರುವುದು ಗಮನಕ್ಕೆ ಬಂದು ತಕ್ಷಣ ರೈಲು ಗುಬ್ಬಿಯಲ್ಲಿ ನಿಲುಗಡೆ ಹೊಂದುತ್ತಿದ್ದಂತೆ ಅಲ್ಲಿ ಇಳಿದುಕೊಂಡು ಪುನಃ ಬೆಂಗಳೂರು ಕಡೆಗೆ ಹೋಗುತ್ತಿದ್ದ ರೈಲು ಹತ್ತಿ ತುಮಕೂರು ನಿಲ್ದಾಣಕ್ಕೆ ಬಂದಿದ್ದಾರೆ.

ಅಲ್ಲಿ ನೋಡಿದಾಗ ಬೆಂಚ್ ಮೇಲೆ ಬ್ಯಾಗ್ ಇಲ್ಲದಿರುವುದನ್ನು ಗಮನಿಸಿ ಎಲ್ಲ ಕಡೆ ಹುಡುಕಾಡಿದ್ದಾರೆ. ನಂತರ ರೈಲ್ವೆ ಸಿಬ್ಬಂದಿಯನ್ನು ವಿಚಾರಿಸಲಾಗಿ ಅವರು ರೈಲ್ವೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ನಿಲ್ದಾಣದಲ್ಲಿದ್ದ ರೈಲ್ವೆ ಇನ್ಸ್‍ಪೆಕ್ಟರ್ ಕುಬೇಂದ್ರಪ್ಪ ಈ ಮಹಿಳೆಯನ್ನು ವಿಚಾರಿಸಿ ಬ್ಯಾಗ್‍ನಲ್ಲಿದ್ದ ವಸ್ತುಗಳ ಬಗ್ಗೆ ಮಾಹಿತಿ ಕೇಳಿ ನಂತರ ಬ್ಯಾಗನ್ನು ಆಕೆಯ ವಶಕ್ಕೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದರು.

ಕೃತಜ್ಞತೆ:

ಸುಮಾರು 97,800ರೂ. ಮೌಲ್ಯದ ಆಭರಣವಿದ್ದ ಬ್ಯಾಗನ್ನು ಒಪ್ಪಿಸಿದ ರೈಲ್ವೆ ಸಿಬ್ಬಂದಿಗಳಿಗೆ ಸವೀನಾ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಸತ್ಯನಾರಾಯಣ್, ರಾಮಲಿಂಗಾರೆಡ್ಡಿ ಇನ್ನಿತರರಿದ್ದರು.

Sri Raghav

Admin