ಈ ದೃಶ್ಯ ಒಮ್ಮೆ ನೋಡಿ..! : ಅತಂತ್ರ ಸ್ಥಿತಿಯಲ್ಲಿ ರಾಜ್ಯದಲ್ಲಿ ರಾಜಕೀಯ ಹೈಡ್ರಾಮಾ

Spread the love

Eesanje-Kumaraswamy
ಬೆಂಗಳೂರು, ಮೇ 15- ದೇಶದ ಗಮನ ಸೆಳೆದಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಜನಾದೇಶವನ್ನು ಮತದಾರ ನೀಡಿಲ್ಲ. ಅಚ್ಚರಿಯ ಬೆಳವಣಿಗೆ ಎಂಬಂತೆ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ರಚನೆಯಾಗಲು ವೇದಿಕೆ ಸಜ್ಜುಗೊಂಡಿದೆ. ಮಂಗಳವಾರ ಪ್ರಕಟಗೊಂಡ 222 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 104 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಕಮಲ ಪಕ್ಷದ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸರಳ ಬಹುಮತದ ಮೂಲಕ ಸರ್ಕಾರ ರಚಿಸಬೇಕಾದರೆ ಯಾವುದೇ ಪಕ್ಷ 112 ಸ್ಥಾನಗಳನ್ನು ಗೆಲ್ಲಬೇಕಿತ್ತು.

ಆಡಳಿತಾರೂಢ ಕಾಂಗ್ರೆಸ್‍ಗೆ ಭಾರೀ ಮುಖಭಂಗವಾಗಿದ್ದು, ಕೇವಲ 78 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ. ಕಿಂಗ್‍ಮೇಕರ್ ಕನಸು ಕಾಣುತ್ತಿದ್ದ ಜೆಡಿಎಸ್‍ಗೆ ಕಾಂಗ್ರೆಸ್ ಬೆಂಬಲ ನೀಡಿರುವುದರಿಂದ ಕರ್ನಾಟಕದ ಚಿತ್ರಣವೇ ಸಂಪೂರ್ಣವಾಗಿ ಬದಲಾವಣೆಯಾಗಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲೇಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್, ಇದಕ್ಕಾಗಿ ತ್ಯಾಗ ಮಾಡಲು ಕೂಡ ಮುಂದಾಗಿದೆ. ಜೆಡಿಎಸ್‍ಗೆ ನಾವು ಬೆಂಬಲ ನೀಡಲು ಸಿದ್ಧವಿದ್ದೇವೆ ಎಂದು ಪಕ್ಷದ ನಾಯಕರು ಮಧ್ಯಾಹ್ನದ ವೇಳೆಗೆ ಘೋಷಣೆ ಮಾಡಿದರು.

Siddaramaiah-Kumaraswamy

ತದನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಸಂಜೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದರು. ಇತ್ತ ಸರ್ಕಾರ ರಚಿಸಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಕೂಡ ರಾಜ್ಯಪಾಲರನ್ನು ಭೇಟಿ ಮಾಡಿದೆ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ತಮ್ಮನ್ನೇ ಸರ್ಕಾರ ರಚಿಸಲು ಅವಕಾಶ ನೀಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್‍ಕುಮಾರ್ ಭೇಟಿಯಾದರು.ರಾಜಭವನದಲ್ಲಿ ಚೆಂಡು: ಇದೀಗ ರಾಜ್ಯಪಾಲ ವಿ.ಆರ್.ವಾಲಾ ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ರಾಜ್ಯ ರಾಜಕಾರಣದ ಸ್ವರೂಪ ನಿರ್ಧಾರವಾಗಲಿದೆ.

ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಯನ್ನು ಸರ್ಕಾರ ರಚಿಸಲು ಅವಕಾಶ ನೀಡಬೇಕೆ, ಇಲ್ಲವೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಅವಕಾಶ ಕೊಡಬೇಕೆ ಎಂಬ ಜಿಜ್ಞಾಸೆ ಎದುರಾಗಿದೆ.
ಬಿಜೆಪಿ ದೊಡ್ಡ ಪಕ್ಷವಾಗಿದ್ದರೂ ಸರಳ ಬಹುಮತ ಪಡೆಯಲು ಸಾಧ್ಯವಾಗುತ್ತಿಲ್ಲ. ಈಗಾಗಲೇ ಗೆದ್ದಿರುವ ಇಬ್ಬರು ಪಕ್ಷೇತರ ಶಾಸಕರು ಕೂಡ ಕಾಂಗ್ರೆಸ್ ಅಂಗಳದಲ್ಲಿದ್ದಾರೆ. ಉಳಿದಂತೆ ಆಪರೇಷನ್ ಕಮಲ ನಡೆಸಿದರೆ ಮಾತ್ರ ಸರ್ಕಾರ ರಚಿಸಲು ಅವಕಾಶವಾಗುತ್ತದೆ.

ಕಾಂಗ್ರೆಸ್ 78, ಜೆಡಿಎಸ್ 38 ಹಾಗೂ ಪಕ್ಷೇತರರು ಇಬ್ಬರು ಸೇರಿದರೆ 118 ಸ್ಥಾನಗಳಾಗುತ್ತವೆ. ಹೀಗಾಗಿ ಈ ಬಾರಿ ರಾಜ್ಯದಲ್ಲಿ ದೋಸ್ತಿ ಸರ್ಕಾರವೇ ರಚನೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ.
ರಾಜ್ಯಪಾಲರ ಚೆಂಡು ಯಾವ ಕಡೆ ವಾಲುತ್ತದೆ ಎಂಬುದರ ಮೇಲೆಯೇ ಎಲ್ಲವೂ ಅವಲಂಬಿತವಾಗಿದೆ.

ಕೈಕೊಟ್ಟ ಕಾಂಗ್ರೆಸ್ ಲೆಕ್ಕಾಚಾರ:
ಕಳೆದ ಐದು ವರ್ಷಗಳ ಅವಧಿಯಲ್ಲಿ ಹಲವು ಭಾಗ್ಯಗಳನ್ನು ನೀಡಿ ಭ್ರಷ್ಟಾಚಾರ ರಹಿತ ಹಗರಣ ಮುಕ್ತ ಸರ್ಕಾರ ನೀಡಿದ್ದೇವೆಂದು ಹೇಳಿಕೊಳ್ಳುತ್ತಿದ್ದ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯಗೆ ಭಾರೀ ಮುಖಭಂಗವಾಗಿದೆ. ಆಡಳಿತಾರೂಢ ಕಾಂಗ್ರೆಸ್‍ನ ಸುಮಾರು 12ಕ್ಕೂ ಅಧಿಕ ಸಚಿವರು ಹಾಗೂ ಶಾಸಕರು ಭಾರೀ ಮತಗಳ ಅಂತರದಲ್ಲಿ ಮುಖಭಂಗ ಅನುಭವಿಸಿದ್ದಾರೆ. ಕರಾವಳಿ ಕರ್ನಾಟಕ, ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮಧ್ಯ ಕರ್ನಾಟಕ, ಬಿಜೆಪಿ ಭರ್ಜರಿ ಫಸಲು ತೆಗೆದಿದ್ದರೆ, ರಾಜಧಾನಿ ಬೆಂಗಳೂರಿನಲ್ಲೂ ಮಿಶ್ರ ಫಲಿತಾಂಶ ಬಂದಿದೆ. ಬಿಜೆಪಿಗೆ ಮೋದಿ

ನಾಮಬಲ:
ಇನ್ನು 104 ಸ್ಥಾನ ಗಳಿಸಿ ಸರ್ಕಾರ ರಚಿಸಲು ಹತ್ತಿರ ಬಂದಿದ್ದ ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ ನಾಮಬಲವೇ ಕೈ ಹಿಡಿದಿದೆ.

ಮೋದಿ ಎಲ್ಲೆಲ್ಲಿ ಪ್ರಚಾರ ನಡೆಸಿದ್ದರೋ ಅಲ್ಲಿ ಕಮಲ ಅರಳಿದೆ. ಆರ್‍ಎಸ್‍ಎಸ್‍ನ ಪ್ರಯೋಗ ಶಾಲೆ ಎಂದೇ ಕರೆಯಲ್ಪಡುವ ಕರಾವಳಿ ತೀರ ಪ್ರದೇಶ ಸಂಪೂರ್ಣ ಕೇಸರಿ ಮಯವಾಗಿದೆ. ಪ್ರತ್ಯೇಕ ಲಿಂಗಾಯತ ಧರ್ಮ ರಚನೆಗೆ ಶಿಫಾರಸು ಮಾಡಿದ್ದು, ಹಿಂದೂ ಮತಗಳ ಧೃವೀಕರಣ ಕಾಂಗ್ರೆಸ್ ಸೋಲಿಗೆ ಕಾರಣ ಎನ್ನಲಾಗುತ್ತಿದೆ.

ಇನ್ನು ಮಾಡು ಇಲ್ಲವೆ ಮಡಿ ಎಂಬ ಸ್ಥಿತಿಯಲ್ಲಿದ್ದ ಜೆಡಿಎಸ್ ತನ್ನ ಸಾಂಪ್ರದಾಯಿಕ ಕ್ಷೇತ್ರಗಳಾಗಿದ್ದ ಹಳೆ ಮೈಸೂರಿನಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಉಳಿದಂತೆ ಹೈದರಾಬಾದ್, ಉತ್ತರ ಕರ್ನಾಟಕ, ಮುಂಬೈ ಕರ್ನಾಟಕದ ಕಡೆ ಅಲ್ಲಲ್ಲಿ ಒಂದೊಂದು ಸ್ಥಾನಗಳನ್ನು ಗೆದ್ದಿದೆ. ಮೇಲ್ನೋಟಕ್ಕೆ ಈ ಚುನಾವಣೆ ರಾಷ್ಟ್ರ ರಾಜಕಾರಣದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಯಾದರೆ ಮೋದಿಯ ಅಶ್ವಮೇಧಯಾಗವನ್ನು ಕಟ್ಟಿಹಾಕಲು ಸಾಧ್ಯವಾಗುತ್ತದೆ.

Facebook Comments

Sri Raghav

Admin