ಈ ಬಾರಿ ಎಸ್ಸೆಸ್ಸೆಲ್ಸಿ-ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಲ್ಲ : ಸೇಠ್ ಭರವಸೆ

Tanveer-Sait--01

ಬೆಂಗಳೂರು,ಫೆ.13- ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ಪ್ರಶ್ನೆಪತ್ರಿಕೆಗಳು ಈ ಬಾರಿ ಸೋರಿಕೆಯಾಗುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ವಿಧಾನಸಭೆಯಲ್ಲಿಂದು ಭರವಸೆ ನೀಡಿದರು. ಶಿಕ್ಷಣ ಇಲಾಖೆ ತಿದ್ದುಪಡಿ ವಿಧೇಯಕ ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಬಾರಿಯ ಪರೀಕ್ಷೆಗಳಿಗೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಹಿಂದೆ ಆಗಿರುವ ಲೋಪ ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.   ಖಜಾನೆಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದ ನಿದರ್ಶನಗಳ ಹಿನ್ನೆಲೆಯಲ್ಲಿ ಸರ್ಕಾರದ ಖಜಾನೆಗಳಿಗೆ ಕ್ಯಾಮೆರಾ ಅಳವಡಿಸಲಾಗುವುದು. ಬಯೋಮೆಟ್ರಿಕ್ ವ್ಯವಸ್ಥೆ ಸೇರಿದಂತೆ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.

ಪ್ರಶ್ನೆಪತ್ರಿಕೆ ಜವಾಬ್ದಾರಿ ಹೊತ್ತ ಅಧಿಕಾರಿ ಬಯೋಮೆಟ್ರಿಕ್ ವ್ಯವಸ್ಥೆಗೆ ಒಳಪಡಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲೇ ಪ್ರಶ್ನೆ ಪತ್ರಿಕೆ ಮುದ್ರಿಸುವ ಉದ್ದೇಶವೂ ಇದೆ. ಬ್ಯಾಂಕರ್‍ಗಳ ಲಾಕರ್ ಬಳಸುವ ಕಡೆಗೂ ಗಮನಹರಿಸುತ್ತಿದ್ದೇವೆ. ಕೇವಲ ಪರೀಕ್ಷಾ ಸಮಯದಲ್ಲಷ್ಟೇ ಅಲ್ಲ. ಮೌಲ್ಯಮಾಪನ ಹಂತದಲ್ಲೂ ಲೋಪವಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.   ಪ್ರಶ್ನೆಪತ್ರಿಕೆ ಮತ್ತು ಮೌಲ್ಯಮಾಪನ ಸಂದರ್ಭದಲ್ಲಿ ಲೋಪವೆಸಗುವ ಶಿಕ್ಷಣ ಸಂಸ್ಥೆಯ ಪರವಾನಗಿ ರದ್ದುಪಡಿಸಿ ದಂಡ ವಿಧಿಸುವ ಶಿಕ್ಷೆಗೆ ಗುರಿಪಡಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಕೈಗೊಂಡ ಎಲ್ಲ ಮುನ್ನೆಚ್ಚರಿಕೆಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ. ಪ್ರಶ್ನೆಪತ್ರಿಕೆ ಸಿದ್ದಪಡಿಸುವ ಹಂತದಿಂದ ಪರೀಕ್ಷಾ ಕೇಂದ್ರಕ್ಕೆ ಕಳುಹಿಸುವವರೆಗೂ ಹಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಯಾವ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾರೋ ಆ ಶಾಲೆ ಪರೀಕ್ಷಾ ಕೇಂದ್ರಕ್ಕೆ ಬದಲಾಗಿ ಬೇರೆ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಅವಕಾಶ ಕಲ್ಪಿಸುವ ಮೂಲಕ ಪರೀಕ್ಷಾ ಅವ್ಯವಹಾರಗಳನ್ನು ತಡೆಯಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.   ಇದಕ್ಕೂ ಮುನ್ನ ಮಾತನಾಡಿದ ಬಿಜೆಪಿ ಶಾಸಕ ಸುರೇಶ್‍ಕುಮಾರ್ ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ನೀತಿ, ನಿಯತ್ತಿನ ಕೊರತೆ ಇದೆ. ಈ ಬಗ್ಗೆ ಕೈಗೊಂಡ ಕ್ರಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ವಿಶ್ವಾಸ ಮೂಡಿಸುವ ಕೆಲಸವಾಗಬೇಕು ಎಂದರು.   ಇದಕ್ಕೆ ದನಿಗೂಡಿಸಿದ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ವೈ.ಎಸ್.ವಿ.ದತ್ತ, ಖಜಾನೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಅಲ್ಲದೆ ಪ್ರತಿಷ್ಠಿತ ಕೆಲವು ಶಿಕ್ಷಣ ಸಂಸ್ಥೆಗಳು ಸೋರಿಕೆ ಹಿಂದಿದೆ. ಅವು ಸೂತ್ರಧಾರಿಯಾದರೆ ವಿದ್ಯಾರ್ಥಿಗಳು ಪಾತ್ರಧಾರಿಗಳು ಮಾತ್ರ. ಅಂತಹ ಸಂಸ್ಥೆಗಳು ಮಾಡುವ ವಾಮಮಾರ್ಗದ ಹಾದಿ ಹಿಡಿದ ಶಾಲೆಗಳಿಂದಾಗಿ ಪ್ರಾಮಾಣಿಕ ಶಾಲೆಗಳಿಗೆ ಶಿಕ್ಷೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin