ಈ ಬಾಲಕನ ಕಣ್ಣಿನಿಂದ ಬೀಳುತ್ತಿವೆ ಕಲ್ಲುಗಳು..! ವಿಚಿತ್ರ ನೋಡಲು ನೆರೆಯುತ್ತಿದೆ ಜನಜಾತ್ರೆ
ಹುಳಿಯಾರು, ಸೆ.16- ಪ್ರಪಂಚದಲ್ಲಿ ಪ್ರತಿ ನಿತ್ಯ ಒಂದಿಲ್ಲೊಂದು ವಿಸ್ಮಯ, ಆಶ್ಚರ್ಯ ಘಟನೆಗಳು ನಡೆಯುತ್ತಲೇ ಇರುತ್ತವೆ. ಈಗ ಕಲ್ಪತರು ನಾಡಿನ ಚಿಕ್ಕನಾಯಕನಹಳ್ಳಿ ಹಂದನಕೆರೆ ಹೋಬಳಿಯ ನರುವಗಲ್ಲು ಗೊಲ್ಲರಹಟ್ಟಿ ಗ್ರಾಮದ ಶಾಲಾ ಬಾಲಕನ ಕಣ್ಣಿನಿಂದ ತಂತಾನೆ ಕಲ್ಲುಗಳು ಬೀಳುತ್ತಿದ್ದು, ಈ ವಿಸ್ಮಯ ನೋಡಲು ಬಾಲಕನ ಮನೆ ಮುಂದೆ ಹಗಲು-ರಾತ್ರಿ ಎನ್ನದೆ ಜನರು ಜಮಾಯಿಸುತ್ತಿದ್ದಾರೆ. ಗ್ರಾಮದ ಲಕ್ಷ್ಮೀಕಾಂತರಾಜು ಹಾಗೂ ನೀಲಮ್ಮ ದಂಪತಿಯ ಮಗ ಪುನೀತ್ ಕುಮಾರ್ ಹುಳಿಯರಿನ ವಾಸವಿ ಪ್ರೌಢಶಾಲೆಯಲ್ಲಿ ಎಂಟನೇ ತರಗತಿಯಲ್ಲಿ ಓದುತ್ತಿದ್ದು, ಅವರ ಕಣ್ಣುಗಳಲ್ಲಿ ಈ ವಿಸ್ಮಯ ನಡೆಯುತ್ತಿದ್ದು ದಿನಕ್ಕೆ ಕನಿಷ್ಠ ಇಪ್ಪತ್ತು ಜೋಳದಾಕಾರದ ಕಲ್ಲುಗಳು ಹೊರ ಬರುತ್ತಿವೆ.
ಹದಿನೈದು ದಿನಗಳ ಹಿಂದೆ ಶಾಲೆಯಲ್ಲಿ ಓದುತ್ತಿರುವಾಗ ಏಕಾಏಕಿ ಕಲ್ಲುಗಳು ಬರಲಾರಂಭಿಸಿತು. ಶಾಲೆಯ ಸಹಪಾಠಿಗಳು ಮೊದಲು ಈ ವಿಸ್ಮಯ ಕಂಡು ಗಾಬರಿಯಿಂದ ಶಿಕ್ಷಕರಿಗೆ ತೋರಿಸಿದ್ದಾರೆ. ಶಿಕ್ಷಕರು ಸಹ ನೋಡು ನೋಡುತ್ತಿದ್ದಂತೆ ಅಚ್ಚರಿ ಎನ್ನುವಂತೆ ಬಲಗಣ್ಣಿನಿಂದ ಕಲ್ಲುಗಳು ಬಿದ್ದವು. ತಕ್ಷಣ ಪೋಷಕರಿಗೆ ವಿಷಯ ಮುಟ್ಟಿಸಿ ಮನೆ ಕಳುಹಿಸಿ ಕೊಟ್ಟಿದ್ದಾರೆ.
ಅದೇ ಕೊನೆ ಅಂದಿನಿಂದ ಶಾಲೆಗೆ ಇತಿಶ್ರೀ ಹಾಡಿ ತನ್ನೂರಿನಲ್ಲೇ ಉಳಿದು ಈ ಅಪರೂಪದ ಘಟನೆ ನೋಡಲು ಬರುವ ಜನರ ಕೇಂದ್ರಬಿಂದುವಾಗಿದ್ದಾನೆ. ಹಗಲು ರಾತ್ರಿ ಎನ್ನದೆ ಜನರು ಈತನ ಮನೆಯ ಮುಂದೆ ಜಮಾಯಿಸುತ್ತಿದ್ದಾರೆ. ಕುತೂಹಲದಿಂದ ಆತನ ಕಣ್ಣಿನಲ್ಲಿ ಕಣ್ಣನ್ನಿಟ್ಟು ನೋಡುತ್ತಿದ್ದಾರೆ. ನೋಡು ನೋಡುತ್ತಿದ್ದಂತೆ ಕಲ್ಲುಗಳು ಬೀಳುತ್ತಿದ್ದನ್ನು ನೋಡಿ ಹೌಹಾರಿ ಹಿಂದಿರುಗುತ್ತಿದ್ದಾರೆ. ಒಟ್ಟಾರೆ ಸುತ್ತಮುತ್ತಲ ಹಳ್ಳಿಗಳಲ್ಲಿ ಈತ ಮನೆ ಮಾತಾಗಿದ್ದಾನೆ.
ಹದಿನೈದು ದಿನಗಳ ಹಿಂದೆ ಬಲಗಣ್ಣಿನ ಕೆಳಗೆ ಮೊದಲು ಒತ್ತಿದ್ದಂತಾಯಿತು. ಉಜ್ಜುತ್ತಿರುವಾಗ ಕಲ್ಲು ಬಂತು. ಮೊದಲು ನನಗೂ ಭಯವಾಯ್ತು. ಈಗ ಇದು ಕಾಮನ್ ಆಗಿದ್ದು ಇದೂವರೆವಿಗೂ ನೂರೈವತ್ತಕ್ಕೂ ಹೆಚ್ಚು ಕಲ್ಲುಗಳು ಬಿದ್ದಿವೆ. ಕಲ್ಲಿನಲ್ಲಿ ನಿರ್ಧಿಷ್ಠ ಗಾತ್ರವಿಲ್ಲ. ಸಾಸಿವೆಯಿಂದ ಹಿಡಿದು ಅಲಸಂದೆ ಕಾಳಿನ ಗಾತ್ರದವರೆವಿಗೂ ಕಲ್ಲು ಬೀಳುತ್ತವೆ. ಕಲ್ಲು ಬೀಳುವಾಗ ನೋವು ಆಗುವುದಿಲ್ಲ. ಕಣ್ಣಿನಲ್ಲಿ ನೀರು ಬರುವುದಿಲ್ಲ ಎಂದು ಪುನೀತ್ ಹೇಳುತ್ತಾನೆ.
ಪುನೀತ್ ತಂದೆ ಲಕ್ಷ್ಮೀಕಾಂತ್ ಮಾತನಾಡಿ, ಮೊದ ಮೊದಲು ದಿನಕ್ಕೆ ಏಳೆಂಟು ಕಲ್ಲುಗಳು ಬೀಳುತ್ತಿದ್ದವು. ಈಗ ಹದಿನೈದಿಪ್ಪತ್ತು ಕಲ್ಲುಗಳು ಬೀಳಲಾರಂಭಿಸಿದೆ. ಇದರಿಂದ ನಮಗೆ ಭಯವಾಗಿದೆ. ಆಸ್ಪತ್ರೆಗೆ ತೋರಿಸಿದರೆ ಚಾನ್ಸೆ ಇಲ್ಲ. ನಿಮ್ಮ ಮಗನೆ ಕಲ್ಲು ಹಾಕಿಕೊಂಡು ತೆಗೆಯುತ್ತಾನೆ ಎಂದು ಅಲ್ಲಗೆಳೆದು ಕಳುಹಿಸಿದರು. ಈಗ ದೇವರ ಮೊರೆ ಹೋಗಿದ್ದೇವೆ ಎಂದರು.
ಒಟ್ಟಾರೆ ಈ ಅಪರೂಪದ ಘಟನೆಯ ಹಿಂದಿನ ವಾಸ್ತವಾಂಶದ ಅರಿವಾಗಬೇಕಿದೆ. ರೈತ ಕೂಲಿ ಕಾರ್ಮಿಕರಾಗಿರುವ ಈ ಕುಟುಂಬ ಇತ್ತೀಚೆಗಷ್ಟೆ ಜೀವನಾಸರೆಯಾಗಿದ್ದ ಹಸು ಸಾವಿನಿಂದ ಆರ್ಥಿಕ ಮುಗ್ಗಟ್ಟಿಗೆ ತುತ್ತಾಗಿದ್ದಾರೆ. ಮಗನಿಗೆ ಹೀಗಾದಗಲಿಂದ ಕೂಲಿಗೂ ಹೋಗದೆ ಬಂದ ಜನರನ್ನು ಸಂಬಳಿಸಿ, ಮಗನನ್ನು ಕಾಯುವುದೆ ನಿತ್ಯ ಕಾಯಕವಾಗಿದೆ. ಹೀಗಿರುವಾಗ ಸರ್ಜನ್ಗೆ ತೋರಿಸಿ ಚಿಕಿತ್ಸೆ ಕೊಡಿಸುವಷ್ಟು ಹಣ ಇವರಲ್ಲಿಲ್ಲ. ಯಾರಾದರೂ ಮುಂದೆ ಬಂದು ಈ ಕುಟುಂಬಕ್ಕೆ ನೆರವಾಗುವ ಅಗತ್ಯವಿದೆ.