‘ಉಗ್ರ’ಭಯ : ಶ್ರೀನಗರದಲ್ಲಿ ಹೈ ಅಲರ್ಟ್, ದೇಶಾದ್ಯಂತ ಕಟ್ಟೆಚ್ಚರ

High-Alert-01

ಶ್ರೀನಗರ, ಅ.6-ಭಾರತದಲ್ಲಿ ಭಯೋತ್ಪಾದಕರು ಪ್ರತೀಕಾರದ ವಿಧ್ವಂಸಕ ಕೃತ್ಯಗಳನ್ನು ಎಸಗಿಲಿದ್ದಾರೆ ಎಂಬ ಗುಪ್ತಚರ ಮಾಹಿತಿ ಬೆನ್ನಲ್ಲೇ ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆ ಹಂದ್ವಾರದ ಸೇನಾ ಕ್ಯಾಂಪ್ ಮೇಲೆ ಆತ್ಮಾಹುತಿ ದಾಳಿ ಉಗ್ರಗಾಮಿಗಳನ್ನು ಭಾರತೀಯ ಯೋಧರು ಇಂದು ಹೊಡೆದುರುಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕೆಲವು ಯೋಧರು ಗಾಯಗೊಂಡಿದ್ದಾರೆ. ಇದೇ ವೇಳೆ ಬಿಹಾರದಲ್ಲಿ ಐವರು ಪಾಕ್ ಮೂಲದ ಉಗ್ರರನ್ನೂ ಬಂಧಿಸಿ ದೆಹಲಿಗೆ ಕರೆಲಾಗಿದೆ.  ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಪಾಕ್ ಬೆಂಬಲಿತ ಉಗ್ರರ ಭಾರತದ ಗಡಿಯೊಳಕ್ಕೆ ನುಸುಳುವ ಹಲವು ಯತ್ನಗಳನ್ನೂ ವಿಫಲಗೊಳಿಸಲಾಗಿದ್ದು, ಸಂಭವನೀಯ ದಾಳಿಗಳ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಭಾರತದ ಗಡಿಯುದ್ದಕ್ಕೂ ಒಳನುಸುಳಲು ನೂರಾರು ಉಗ್ರರು ಸಜ್ಜಾಗಿದ್ದಾರೆ ಎಂಬ ಆಘಾತಕಾರಿ ಮಾಹಿತಿಯನ್ನು ನಿನ್ನೆಯಷ್ಟೇ ಗುಪ್ತಚರ ಇಲಾಖೆ ನೀಡಿತ್ತು.

ಲಷ್ಕರ್ ಸಂಘಟನೆಯ ಆತ್ಮಾಹುತಿ ದಳಕ್ಕೆ ಸೇರಿದ ಮೂವರು ಉಗ್ರರು ಇಂದು ಮುಂಜಾನೆ ಮಿಲಿಟರಿ ಸಮವಸ್ತ್ರದಲ್ಲಿ ಕುಪ್ವಾರ ಜಿಲ್ಲೆಯ ಹಂದ್ವಾರ ಲಂಗೇಟ್‍ನ 30ನೇ ರಾಷ್ಟ್ರೀಯ ರೈಫಲ್ಸ್ ಸೇನಾ ಶಿಬಿರದ ಮೇಲೆ ಭಾರೀ ವಿಧ್ವಂಸಕ ಕೃತ್ಯ ಎಸಗಲು ಮುಂದಾಗಿ ಮನಬಂದಂತೆ ಗುಂಡು ಹಾರಿಸಿದರು. ತಕ್ಷಣ ಎಚ್ಚೆತ್ತುಕೊಂಡ ಸಿಬ್ಬಂದಿ ಪ್ರತಿದಾಳಿ ನಡೆಸಿದಾಗ ಭೀಕರ ಗುಂಡಿನ ಚಕಮಕಿ ನಡೆಯಿತು. ನಂತರ ಮೇಲುಗೈ ಸಾಧಿಸಿದ ಭಾರತೀಯ ಯೋಧರು ಮೂವರು ಉಗ್ರರನ್ನು ಹೊಡೆದುರುಳಿಸಿದರು. ಹತರಾದ ಭಯೋತ್ಪಾದಕರಿಂದ 3 ಕಲಾಶ್ನಿಕೋವ್ ರೈಫಲ್‍ಗಳು, ಅಪಾರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ಪಾಕ್ ಮೂಲದ ಭಯೋತ್ಪಾದಕರು ಎಂಬುದು ಸಾಬೀತಾಗಿದೆ.

ಉಗ್ರರು ಮತ್ತು ಯೋಧರ ನಡುವೆ ಸುಮಾರು 25 ನಿಮಿಷಗಳ ಕಾಲ ಎನ್‍ಕೌಂಟರ್ ನಡೆಯಿತು. ಹತರಾದ ಭಯೋತ್ಪಾದಕರು ಲಷ್ಕರ್-ಇ-ತೋಯ್ಬಾ ಸಂಘಟನೆಗೆ ಸೇರಿದವರು. ಈ ಪ್ರದೇಶದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ನುಸುಳಿರಬಹುದಾದ ಇನ್ನಷ್ಟು ಉಗ್ರಗಾಮಿಗಳಿಗಾಗಿ ವ್ಯಾಪಕ ಶೋಧ ನಡೆಯುತ್ತಿದೆ. ಈ ಮಧ್ಯೆ, ನೇಪಾಳ ಮಾರ್ಗವಾಗಿ ಬಿಹಾರಕ್ಕೆ ನುಸುಳಿದ್ದ ಪಾಕಿಸ್ತಾನ ಮೂಲದ ಐವರು ಶಂಕಿತ ಉಗ್ರರನ್ನು ಬಂಧಿಸಿರುವ ಎನ್‍ಐಎ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ದೆಹಲಿಗೆ ಕರೆತಂದಿದ್ದಾರೆ. ಇತ್ತ ಪಂಜಾಬ್ ಮತ್ತು ಉತ್ತರಾಖಂಡ್‍ನಲ್ಲೂ ಉಗ್ರರು ನುಸುಳಿರುವ ಶಂಕೆ ಇದ್ದು, ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ತೀವ್ರ ನಿಗಾ ಇಡಲಾಗಿದೆ.

ಇದೇ ವೇಳೆ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‍ಓಸಿ) ಪಾಕಿಸ್ತಾನಿ ಯೋಧರ ಕುಮ್ಮಕ್ಕಿನಿಂದ ಭಾರತದ ಗಡಿಯೊಳಗೆ ಒಳನುಸುಳುವ ಉಗ್ರಗಾಮಿಗಳ ಮೂರು ಯತ್ನಗಳನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.  ಕಾಶ್ಮೀರದ ಎಲ್‍ಒಸಿ ವಲಯದಲ್ಲಿ ನಿನ್ನೆಯಿಂದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಮೂರು ಒಳನುಸುಳುವಿಕೆ ಯತ್ನಗಳನ್ನು ವಿಫಲಗೊಳಿಸಲಾಗಿದೆ ಎಂದು ಉನ್ನತ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.  ಕಾಶ್ಮೀರ ಕಣಿವೆ ನೌಗಾಮ್ ವಲಯದಲ್ಲಿ ಎರಡು ಮತ್ತು ರಾಂಪುರ ವಲಯದಲ್ಲಿ ಒಂದು ನುಸುಳುವಿಕೆ ಯತ್ನಗಳನ್ನು ವಿಫಲಗೊಳಿಸಲಾಗಿದೆ. ಪಾಕಿಸ್ತಾನ ಸೇನಾ ನೆಲೆಯಿಂದಲೇ ಉಗ್ರಗಾಮಿಗಳಿಗೆ ಕುಮ್ಮಕ್ಕು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಇನ್ನೊಂದು ಬೆಳವಣಿಗೆಯಲ್ಲಿ ರಾಜಧಾನಿ ಶ್ರೀನಗರದೊಳಗೆ ಐದಾರು ಉಗ್ರರು ನುಸುಳಿರುವ ಬಗ್ಗೆ ಗುಪ್ತಚರ ಮೂಲದಿಂದ ಖಚಿತ ಮಾಹಿತಿ ಲಭಿಸಿದ್ದು, ಹೈ ಅಲರ್ಟ್ ಘೋಷಿಸಲಾಗಿದೆ. ಸೇನೆ ಮತ್ತು ಪೊಲೀಸರು ಭಯೋತ್ಪಾದಕರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಉಗ್ರಗಾಮಿಗಳು ಒಳನುಸುಳಿದ್ದು, ದಾಳಿ ಭೀತಿಯಿಂದಿ ದೇಶಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

► Follow us on –  Facebook / Twitter  / Google+

Sri Raghav

Admin