ಉಗ್ರರಿಗೆ ಪಾಕ್ನಿಂದ ಹಣ : ಮುಂದುವರಿದ ಎನ್ಐಎ ತಪಾಸಣೆ
ಶ್ರೀನಗರ, ಜೂ.4-ಪಾಕಿಸ್ತಾನದಿಂದ ಭಯೋತ್ಪಾದನೆ ಕೃತ್ಯಗಳಿಗಾಗಿ ಹಣ ಸ್ವೀಕರಿಸಿದ ಆರೋಪಗಳ ಸಂಬಂಧ ದೇಶದ ವಿವಿಧೆಡೆ ಹುರಿಯತ್ ನಾಯಕರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ-ಎನ್ಐಎ ಅಧಿಕಾರಿಗಳು ಇಂದೂ ಸಹ ಕಾರ್ಯಾಚರಣೆ ಮುಂದುವರಿಸಿದರು. ಕಾಶ್ಮೀರ ರಾಜಧಾನಿ ಶ್ರೀನಗರ ಸೇರಿದಂತೆ ವಿವಿಧೆಡೆ ಇಂದು ಕೂಡ ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರಿಶೀಲಿಸಿದರು. ಕಟ್ಟಾ ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗಿಲಾನಿಯ ಮತ್ತಷ್ಟು ಸಹಚರರು ಮತ್ತು ಸಂಬಂಧಿಕರು ಹಾಗೂ ಹುರಿಯತ್ ಕಾನೆರೆನ್ಸ್ ಕೆಳ ಹಂತದ ನಾಯಕರ ಮನೆಗಳನ್ನು ಇಂದು ಅಧಿಕಾರಿಗಳು ಜಾಲಾಡಿದ್ದಾರೆ.
ರಾಜಧಾನಿ ಜಮ್ಮು-ಕಾಶ್ಮೀರ, ದೆಹಲಿ ಹಾಗೂ ಹರಿಯಾಣದ ಹಲವೆಡೆ ಹುರಿಯತ್ ನಾಯಕರ ನಿವಾಸಗಳ ಮೇಲೆ ಎನ್ಐಎ ಅಧಿಕಾರಿಗಳು ನಿನ್ನೆ ಏಕಕಾಲದಲ್ಲಿ ದಾಳಿ ನಡೆಸಿ ತೀವ್ರ ಶೋಧ ಕಾರ್ಯಾಚರಣೆ ಕೈಗೊಂಡು, ಲಕ್ಷಾಂತರ ರೂ.ಗಳ ಭಯೋತ್ಪಾದನೆ ಹಣವನ್ನು ಪತ್ತೆ ಮಾಡಿ, ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದರು. ಕಾಶ್ಮೀರದ 14, ದೆಹಲಿಯ 8 ಹಾಗೂ ಹರ್ಯಾಣದ 2 ಕಡೆಗಳಲ್ಲಿ ಹುರಿಯತ್ ಮತ್ತು ಪ್ರತ್ಯೇಕತಾವಾದಿ ಮುಖಂಡರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದಾಗ ಭಯೋತ್ಪಾದನೆಗೆ ಹಣ ನೀಡಿಕೆಗೆ ಸಂಬಂಧಪಟ್ಟ ಮಹತ್ವದ ದಾಖಲೆ ಪತ್ರಗಳು ಕಂಡು ಬಂದಿತ್ತು.
ಪ್ರತ್ಯೇಕತಾವಾದಿ ನಾಯಕ ನಯೀಮ್ ಖಾನ್ ಹಾಗೂ ತೆಹ್ರೀಕ್-ಎ-ಹುರಿಯತ್ ಸಂಘಟನೆಯ ಮುಖಂಡರಾದ ಫಾರೂಕ್ ಅಹಮದ್ ದರ್ ಅಲಿಯಾಸ್ ಬಿಟ್ಟಾ ಕರಾಟೆ ಹಾಗೂ ಗಾಜಿ ಜಾವೇದ್ ಬಾಬಾ- ಈ ಮೂವರು ಪಾಕಿಸ್ತಾನ ಮೂಲದ ಭಯೋತ್ಪಾದನೆ ಸಂಘಟನೆಗಳಿಂದ ಹಣಕಾಸು ಪಡೆಯುತ್ತಿದ್ದ ಆರೋಪಗಳ ಮೇಲೆ ಎನ್ಐಇ ಇತ್ತೀಚೆಗೆ ದೆಹಲಿಯಲ್ಲಿ ಇವರನ್ನು ತೀವ್ರ ವಿಚಾರಣೆಗೆ ಒಳಪಡಿಸಿತ್ತು.
< Eesanje News 24/7 ನ್ಯೂಸ್ ಆ್ಯಪ್ >