ಉಗ್ರರ ಅಡಗುದಾಣದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ ವಶಕ್ಕೆ, ತಪ್ಪಿದ ಘೋರ ದುರಂತ

Arms

ರಜೌರಿ, ಅ.27-ಮಹತ್ವದ ಕಾರ್ಯಾಚರಣೆಯೊಂದರಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ರಜೌರಿ ಜಿಲ್ಲೆಯ ಉಗ್ರರ ಅಡುಗುದಾಣವೊಂದರ ಮೇಲೆ ದಾಳಿ ನಡೆಸಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ಕಾಶ್ಮೀರ ಕಣಿವೆಯಲ್ಲಿ ನಡೆಯಲಿದ್ದ ಮತ್ತೊಂದು ಮಾರಣಹೋಮ ತಪ್ಪಿದಂತಾಗಿದೆ.  ಕಾಶ್ಮೀರದ ರಜೌರಿ ಜಿಲ್ಲೆಯ ಭಾರತ-ಪಾಕ್ ಗಡಿ ನಿಯಂತ್ರಣ ರೇಖೆ (ಎಲ್‍ಓಸಿ) ಬಳಿ ಗನಿ ಅರಣ್ಯದಲ್ಲಿ ಉಗ್ರರ ಅಡಗುದಾಣವನ್ನು ಪತ್ತೆ ಮಾಡುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಮೂರು ಚೀನಿ ಪಿಸ್ತೂಲುಗಳು, 120 ಪಿಸ್ತೂಲ್ ಗುಂಡುಗಳು, 15 ಮೀಟರ್ ಕಾರ್ಡೆಕ್ಸ್ ವೈರ್, ಒಂದು ಐಇಡಿ ಸ್ಫೋಟಕ ಟೈಮರ್ ಮತ್ತು ಚಾರ್ಜರ್ ಜೊತೆ ಒಂದು ವೈರ್‍ಲೆಸ್ ಸೆಟ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಖಚಿತ ಸುಳಿವಿನ ಮೇಲೆ ಬಿಎಸ್‍ಎಫ್ ಯೋಧರು, ಪೊಲೀಸರು ಮತ್ತು ಎಸ್‍ಒಜಿ ಸಿಬ್ಬಂದಿ ಜಂಟಿ ಕಾರ್ಯಚರಣೆ ನಡೆಸಿದ್ದು, ದಾಳಿಗೆ ಮುನ್ನವೇ ಭಯೋತ್ಪಾದರು ಪರಾರಿಯಾಗಿದ್ದಾರೆ ಎಂದು ಬಿಎಸ್‍ಎಫ್ ವಕ್ತಾರರೊಬ್ಬರು ತಿಳಿಸಿದ್ದಾರೆ.  ಕಳೆದ ಮೂರು ದಿನಗಳ ಹಿಂದೆಷ್ಟೇ ಸಹ ಕಾಶ್ಮೀರದ ಕೆಲವೆಡೆ ಬಿಎಸ್‍ಎಫ್ ಯೋಧರು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು.

► Follow us on –  Facebook / Twitter  / Google+

Sri Raghav

Admin