ಉತ್ತರ ಪ್ರದೇಶದಲ್ಲಿ ಎಸ್ಪಿ ಕಾರ್ಯಕರ್ತರ ಹೈಡ್ರಾಮ
ಲಕ್ನೊ,ಅ.24- ಉತ್ತರ ಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದಲ್ಲಿ ಒಂದೆಡೆ ಯಾದವೀ ಕಲಹ ಭುಗಿಲೆದಿದ್ದರೆ, ಮತ್ತೊಂದೆಡೆ ಎರಡೂ ಬಣದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಮತ್ತು ಘರ್ಷಣೆಗೆ ಕಾರಣವಾದ ಪ್ರಸಂಗ ಎಸ್ಪಿ ಕಚೇರಿ ಮುಂದೆ ನಡೆದಿದೆ. ಪಕ್ಷದ ಪರಮೋಚ್ಚ ನಾಯಕ ಮುಲಾಯಂಸಿಂಗ್ ಯಾದವ್ ಇಂದು ಕರೆದಿದ್ದ ಪಕ್ಷದ ಸಂಸದರು, ಸಚಿವರು ಮತ್ತು ಶಾಸಕರ ಸಭೆಯ ಸಂದರ್ಭದಲ್ಲೇ ಕಚೇರಿ ಹೊರಗೆ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಶಿವಪಾಲ್ ಸಿಂಗ್ ಯಾದವ್ ಕಾರ್ಯಕರ್ತರು ಪರಸ್ಪರ ಮಾತಿನ ಚಕಮಕಿ ಮತ್ತು ಘರ್ಷಣೆಯಲ್ಲಿ ತೊಡಗಿದಾಗ ಪೊಲೀಸರು ಮಧ್ಯ ಪ್ರವೇಶಿಸಬೇಕಾಯಿತು.
ಈ ಮಧ್ಯೆ ತಾವು ಪ್ರತ್ಯೇಕ ಪಕ್ಷ ರಚಿಸುವುದಿಲ್ಲ ಎಂದು ಅಖಿಲೇಶ್ ಸ್ಪಷ್ಟಪಡಿಸಿದ್ದಾರೆ. ಮುಲಾಯಂಸಿಂಗ್ ಯಾದವ್ ಇಂದು ಕರೆದಿದ್ದ ಸಭೆಯಲ್ಲಿ ಭಾವುಕರಾಗಿ ಮಾತನಾಡಿದ ಅವರು, ಪಕ್ಷದ ಉನ್ನತ ನಾಯಕರು ಬಯಸಿದರೆ ತಾವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ತಿಳಿಸಿದ್ದಾರೆ.