ಉತ್ತರ ಪ್ರದೇಶ – ಮಣಿಪುರದಲ್ಲಿ ನಾಳೆ ಅಂತಿಮ ಹಂತದ ಮತದಾನ

Voting-01

ಲಕ್ನೋ/ಇಂಫಾಲ್, ಮಾ.7-ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ ನಾಳೆ ಅಂತಿಮ ಹಂತದ ಮತದಾನ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ನಾಳೆ ಏಳನೇ ಮತ್ತು ಕೊನೆ ಹಂತ ಹಾಗೂ ಈಶಾನ್ಯ ರಾಜ್ಯ ಮಣಿಪುರದಲ್ಲಿ ಎರಡನೇ ಮತ್ತು ಅಂತಿಮ ಹಂತಕ್ಕೆ ನಡೆಯುವ ಮತದಾನಕ್ಕಾಗಿ ವ್ಯಾಪಕ ಬಂದೋಬಸ್ತ್ ಮಾಡಲಾಗಿದೆ.   ಮಾರ್ಚ್ 11ರಂದು ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ತೀವ್ರ ಕುತೂಹಲ ಕೆರಳಿಸಿದೆ. ಉತ್ತರಪ್ರದೇಶದ ಪ್ರಧಾನಿ ನರೇಂದ್ರ ಮೋದಿ ಪರ ಅಲೆ ಎದ್ದಿರುವುದರಿಂದ ಬಿಜೆಪಿ ಬಹುಮತ ಗಳಿಸುವ ಸಾಧ್ಯತೆ ಇದೆ ಈಗಾಗಲೇ ಚುನಾವಣಾ ಪೂರ್ವ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಇದಕ್ಕೆ ಪುಷ್ಟಿ ನೀಡುವಂತೆ ಕೊನೆ ಹಂತದ ಚುನಾವಣೆ ಪ್ರಚಾರದ ವೇಳೆ ವಾರಣಾಸಿಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಬಿಜೆಪಿ ಪರ ಮತದಾರರ ಒಲವಿದೆ ಎಂಬುದನ್ನು ಸಾಬೀತು ಮಾಡುತ್ತದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.

ಲಕ್ನೋ ವರದಿ:

ಉತ್ತರ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಕ್ಷೇತ್ರ ವಾರಣಾಸಿ ಸೇರಿದಂತೆ ಏಳು ಜಿಲ್ಲೆಗಳ 40 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 535 ಅಭ್ಯರ್ಥಿಗಳು ಕಣದಲ್ಲಿದ್ದು, 1.41 ಕೋಟಿ ಮತದಾರರು ತಮ್ಮ ಸಂವಿಧಾನಿಕ ಹಕ್ಕುಗಳನ್ನು ಚಲಾಯಿಸಲಿದ್ದಾರೆ. 14,458 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತಾ ಏರ್ಪಾಡು ಮಾಡಲಾಗಿದೆ.   ಅಂತಿಮ ಹಂತದ ಚುನಾವಣೆಗಾಗಿ ನಿನ್ನೆ ಸಂಜೆ ಬಿರುಸಿನ ಪ್ರಚಾರಕ್ಕೆ ತೆರೆ ಬಿದ್ದಿತ್ತು. ವಾರಣಾಸಿಯಲ್ಲಿ ಕಳೆದ ಮೂರು ದಿನಗಳಿಂದ ಮೋದಿ ರೋಡ್ ಶೋ ಮತ್ತು ರ್ಯಾಲಿಗಳ ಮೂಲಕ ಅಬ್ಬರದ ಪ್ರಚಾರ ನಡೆಸಿದ್ದರು. ಕಾಂಗ್ರೆಸ್-ಸಮಾಜವಾದಿ ಪಕ್ಷದಿಂದ ಜಂಟಿಯಾಗಿ ರಾಹುಲ್‍ಗಾಂಧಿ ಮತ್ತು ಅಖಿಲೇಶ್ ಯಾದವ್ ಚುನಾವಣಾ ಪ್ರಚಾರ ಕೈಗೊಂಡಿದ್ದರು. ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಕೂಡ ರ್ಯಾಲಿ ನಡೆಸಿ ಮತದಾರರನ್ನು ಓಲೈಸುವ ಯತ್ನ ನಡೆಸಿದ್ದರು.

ಇಂಫಾಲ್ ವರದಿ :

ಈಶಾನ್ಯ ರಾಜ್ಯ ಮಣಿಪುರದಲ್ಲಿ ನಾಳೆ ಎರಡನೇ ಮತ್ತು ಕೊನೆ ಹಂತದ ಚುನಾವಣೆಗಾಗಿ ವೇದಿಕೆ ಸಜ್ಜಾಗಿದೆ. 5 ಜಿಲ್ಲೆಗಳ 22 ವಿಧಾನಸಭಾ ಕ್ಷೇತ್ರಗಳ ಮತದಾನ ನಡೆಯಲಿದ್ದು, 98 ಹುರಿಯಾಳುಗಳ ಭವಿಷ್ಯ ನಿರ್ಧಾರವಾಗಲಿದೆ. 1,151 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಬಿಗಿ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿದೆ.   ದೀರ್ಘಕಾಲ ಉಪವಾಸ ನಡೆಸಿ ಸುದ್ದಿಯಾಗಿದ್ದ ಮಾನವ ಹಕ್ಕುಗಳ ಕಾರ್ಯಕರ್ತೆ ಶರ್ಮಿಳಾ ಅವರು ಮುಖ್ಯಮಂತ್ರಿ ಓಕ್ರಾಮ್ ಇಬೋಬಿ ಸಿಂಗ್ ವಿರುದ್ಧ ತೌಬಲ್ ವಿಧಾನಸಭಾ ಕ್ಷೇತ್ರದಲ್ಲಿ ಕಣಕ್ಕಿಳಿದಿರುವುದು ಕುತೂಹಲ ಕೆರಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin