ಉತ್ತರ ಭಾರತದಲ್ಲಿ ಮಂಜಿನ ಹೊದಿಕೆ : 114 ರೈಲುಗಳ ಸಂಚಾರಕ್ಕೆ ಅಡ್ಡಿ

Train-Fog

ನವದೆಹಲಿ, ಡಿ.10-ರಾಜಧಾನಿ ನವದೆಹಲಿ ಸೇರಿದಂತೆ ಉತ್ತರ ಪ್ರದೇಶದ ಹೆಲವಡೆ ದಟ್ಟ ಮಂಜಿನ ಹೊದಿಕೆ ಮುಂದುವರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಮಂಜಿನ ತೆರೆ ಆವರಿಸಿರುವುದರಿಂದ 114 ರೈಲುಗಳ ಸಂಚಾರಕ್ಕೆ ಅಡ್ಡಿಯಾಗಿದೆ. ಪ್ರಯಾಣಿಕರು ಸಕಾಲದಲ್ಲಿ ತಾವು ತಲುಪಬೇಕಾದ ಸ್ಥಳಗಳನ್ನು ತಲುಪದೇ ಪರದಾಡುತ್ತಿದ್ದಾರೆ.  ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲೂ ಪ್ರತಿಕೂಲ ಹವಾಮಾನದಿಂದ ಹಲವಾರು ವಿಮಾನಗಳ ಹಾರಾಟ ವಿಳಂಬವಾಗಿದೆ. ಕಳೆದ ಒಂದು ವಾರದಿಂದಲೂ ದೆಹಲಿ, ಲಖನೌ ಹಾಗೂ ಉತ್ತರಭಾರತದಲ್ಲಿ ಮುಂಜಾನೆಯಿಂದಲೇ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದೆ. ಅಲ್ಲದೇ ಹೆದ್ದಾರಿಗಳ ಮೇಲೂ ದಟ್ಟ ಮಂಜು ಕವಿದಿರುವುದರಿಂದ ವಾಹನಗಳ ಸುಗಮ ಪ್ರಯಾಣಕ್ಕೂ ಅಡಚಣೆಯಾಗಿದೆ.

ಉತ್ತರಪ್ರದೇಶ, ಹರ್ಯಾಣ, ಪಶ್ಚಿಮ ಬಂಗಾಳ, ಪಂಜಾಬ್ ರಾಜ್ಯಗಳೂ ಒಳಗೊಂಡಂತೆದೇಶದ ವಿವಿಧ ಭಾಗಗಳಲ್ಲೂ ಜನ ಚಳಿಯಿಂದ ನಡುಗುತ್ತಿದ್ದಾರೆ. ನಿನ್ನೆ ಪಶ್ಚಿಮ ಬಂಗಾಳ ಮತ್ತು ಪಂಜಾಬ್‍ನಲ್ಲಿ ಹೆದ್ದಾರಿಗಳಲ್ಲಿ ಮಂಜು ಮುಸುಕಿದ ಕಾರಣ ಸಂಭವಿಸಿದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ 20ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು. ಮಂಜಿನ ಲಕೋಟೆಯಲ್ಲಿ ಕಾಶ್ಮೀರ : ಕಣಿವೆ ರಾಜ್ಯ ಕಾಶ್ಮೀರವೂ ಕಳೆದ ಒಂದು ವಾರದಿಂದ ಮಂಜಿನ ಲಕೋಟೆಯೊಳಗೆ ಹುದುಗಿ ಹೋಗಿದೆ. ತಾಪಮಾನ ತೀವ್ರವಾಗಿ ಕುಸಿದಿದ್ದು, ಜನರು ಮನೆಯೊಳಗೆ ಬೆಚ್ಚಗೆ ಬಂಧಿತರಾಗಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin