ಉದ್ಯಮಿ ಭಾಸ್ಕರ್‍ಶೆಟ್ಟಿ ಕೊಲೆ ಪ್ರಕರಣದಲ್ಲಿ ಇನ್ನೂ ಹಲವರ ಕೈವಾಡ..?

Bhaskar-Shetty--Murder

ಉಡುಪಿ, ಆ.13- ಹೆಂಡತಿ ಮತ್ತು ಮಗನಿಂದಲೇ ಅಮಾನುಷವಾಗಿ ಕೊಲೆಯಾಗಿರುವ ಹೊಟೇಲ್ ಉದ್ಯಮಿ ಭಾಸ್ಕರ್‍ಶೆಟ್ಟಿ ಪ್ರಕರಣದ ಸಂಚನ್ನು ಆರೋಪಿಗಳು ವ್ಯವಸ್ಥಿತವಾಗಿ ರೂಪಿಸಿರುವುದು ತನಿಖೆ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ.  ಪ್ರಕರಣದಲ್ಲಿ ಭಾಸ್ಕರ್‍ಶೆಟ್ಟಿ ಪತ್ನಿ ರಾಜೇಶ್ವರಿ, ಪುತ್ರ ನವನೀತ್, ನಿರಂಜನ್ ಭಟ್, ರಾಘವೇಂದ್ರ, ಶ್ರೀನಿವಾಸಶೆಟ್ಟಿ ಈ ಐವರನ್ನು ಬಂಧಿಸಿ ವಿಚಾರಣೆಗೊಳಪಡಿಸಿರುವ ಪೊಲೀಸರಿಗೆ ಭಯಂಕರವಾದ ಅಂಶಗಳು ಬೆಳಕಿಗೆ ಬರುತ್ತಿದ್ದು, ಇನ್ನೂ ಕೊಲೆಗೆ ಪೂರಕವಾದ ಸಾಕ್ಷ್ಯಾಧಾರಗಳು ದೊರೆಯದಿರುವುದು ತಲೆಬಿಸಿಯಾಗಿದೆ.  ವ್ಯವಸ್ಥಿತ ಸಂಚು ರೂಪಿಸಿ ಪೂರ್ವ ಯೋಜಿತವಾಗಿ ಈ ಕೊಲೆ ಮಾಡಿರುವ ಸಾಧ್ಯತೆ ಇದೆ. ಯಾವುದೇ ರೀತಿಯ ಕುರುಹು ಸಿಗದಂತೆ ಆರೋಪಿಗಳು ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಕೊಲೆ ಮಾಡಿರುವುದಾಗಿ ವಿಚಾರಣೆ ಸಂದರ್ಭದಲ್ಲಿ ಪೊಲೀಸರೆದುರು ಒಪ್ಪಿಕೊಂಡಿದ್ದಾರೆ. ಆದರೆ, ಅದಕ್ಕೆ ಸಂಬಂಧಿಸಿದ ಕುರುಹುಗಳು, ಮೃತ ದೇಹದ ಅವಶೇಷಗಳು ಇನ್ನೂ ಸಮರ್ಪಕವಾಗಿ ಪೊಲೀಸರಿಗೆ ದೊರೆತಿಲ್ಲ ಎನ್ನಲಾಗಿದೆ.
ಮೃತ ದೇಹವನ್ನು ಹೋಮಕುಂಡದಲ್ಲಿ ಪೆಟ್ರೋಲ್ ಹಾಕಿ ಸುಟ್ಟು ಅದನ್ನು ಹತ್ತಿರದ ಹೊಳೆಯಲ್ಲಿ ಬಿಟ್ಟಿದ್ದಾರೆ. ಹೊಳೆಯನ್ನೆಲ್ಲ ಜಾಲಾಡಿರುವ ತನಿಖಾ ತಂಡಕ್ಕೆ ಮೂಳೆಯ ತುಣುಕುಗಳು ಸಿಕ್ಕಿವೆ. ಅವು ಭಾಸ್ಕರ್‍ಶೆಟ್ಟಿಯವೇ ಎಂಬುದನ್ನು ದೃಢಪಡಿಸಿಕೊಳ್ಳಲು ಎಫ್‍ಎಸ್‍ಎಲ್‍ಗೆ ಕಳುಹಿಸಿಕೊಡಲಾಗಿದೆ.
ಅಲ್ಲಿಂದ ವರದಿ ಬಂದ ನಂತರ ವಿಚಾರಣೆ ಮತ್ತಷ್ಟು ತೀವ್ರಗೊಳ್ಳಲಿದೆ. ಆರೋಪಿಗಳನ್ನು ನ್ಯಾಯಾಲಯ ಇನ್ನೂ ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದು, ಈ ಕೊಲೆಯಲ್ಲಿ ಇನ್ನೂ ಯಾರ್ಯಾರು ಭಾಗಿಯಾಗಿದ್ದಾರೆ ಎಂದು ಬಾಯಿಬಿಡಿಸುವ ಪ್ರಯತ್ನ ಮಾಡುತ್ತಿದ್ದಾರೆ.
ಸುಮಾರು 300 ಕೋಟಿ ರೂ.ಗಳ ಒಡೆಯ, ಎನ್‍ಆರ್‍ಐ ಉದ್ಯಮಿ ಭಾಸ್ಕರ್‍ಶೆಟ್ಟಿ ಈ ರೀತಿ ಕೊಲೆಯಾಗಿರುವುದರ ಹಿಂದೆ ಇಷ್ಟೇ ಜನರಿಲ್ಲ, ಇನ್ನೂ ದೊಡ್ಡ ಸಂಚಿರಬಹುದೆಂಬ ಆಯಾಮದಲ್ಲಿ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ.  ಈ ನಡುವೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮೃತದೇಹವನ್ನು ಹೋಮಕುಂಡದಲ್ಲಿ ಸುಟ್ಟು ಹೊಳೆಯಲ್ಲಿ ಬಿಟ್ಟು ಸಾಕ್ಷ್ಯಾಧಾರಗಳನ್ನು ನಾಶಪಡಿಸಿದ ಆರೋಪದಲ್ಲಿ ಬಂಧಿತನಾಗಿ ವಜ್ರದ ಕಿವಿ ಓಲೆ ಹಾಗೂ ಉಂಗುರ ನುಂಗಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿರುವ ನಿರಂಜನ್‍ಭಟ್ ಚೇತರಿಸಿಕೊಂಡಿದ್ದು, ಆತನಿಂದಲೂ ಇನ್ನೂ ಹೆಚ್ಚಿನ ಮಾಹಿತಿ ಹೊರತೆಗೆಯಬೇಕಾಗಿದೆ. ಪೊಲೀಸರು ಈ ನಿಟ್ಟಿನಲ್ಲೂ ತನಿಖೆಯನ್ನು ಮುಂದುವರಿಸಿದ್ದಾರೆ. ಒಟ್ಟಾರೆ ಈ ನಾಗರಿಕ ಸಮಾಜವೇ ಬೆಚ್ಚಿ ಬೀಳಿಸುವಂತಹ ಈ ಘಟನೆ ಪೊಲೀಸರಿಗೆ ಒಂದು ಸವಾಲಾಗಿ ಪರಿಣಮಿಸಿದೆ.

► Follow us on –  Facebook / Twitter  / Google+

Sri Raghav

Admin