ಉನ್ನತ ಶಿಕ್ಷಣ ಪಠ್ಯ ಕ್ರಮದಲ್ಲಿ ಕೃಷಿಯನ್ನು ಸೇರಿಸಲು ಶಿಫಾರಸು

World-01

ಬೆಂಗಳೂರು, ಅ.16- ಕೃಷಿ ಈವರೆಗೂ ಲಾಭದಾಯಕವಾಗಿಲ್ಲ. ಹಾಗಾಗಿ ಕೃಷಿಯಿಂದ ಯುವಜನತೆ ವಿಮುಖರಾಗುತ್ತಿದ್ದಾರೆ. ಕೃಷಿಯನ್ನು ಪಠ್ಯ ಕ್ರಮದಲ್ಲಿ ಸೇರ್ಪಡೆ ಮಾಡಿ ಸೂಕ್ತ ತಂತ್ರಜ್ಞಾನ ಮತ್ತು ತಿಳುವಳಿಕೆ ನೀಡುವ ಅಗತ್ಯವಿರುವುದರಿಂದ ಕೃಷಿಯನ್ನು ಉನ್ನತ ಶಿಕ್ಷಣಕ್ಕೆ ಸೇರ್ಪಡೆ ಮಾಡುವಂತೆ ಶಿಫಾರಸು ಮಾಡಲಾಗಿದೆ ಎಂದು ಭಾರತದ ಕೃಷಿಅನುಸಂಧಾನ ಪರಿಷತ್‍ನ ನಿವೃತ್ತ ಮಹಾನಿರ್ದೇಶಕ ಡಾ.ಎಸ್.ಅಯ್ಯಪ್ಪನ್ ಹೇಳಿದರು.

ನಗರದ ಪಶುವೈದ್ಯಕೀಯ ಮಹಾವಿದ್ಯಾನಿಲಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಆಹಾರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ಗ್ರಾಮೀಣ ಭಾಗದ ಜನ ಕೃಷಿ ಬಿಟ್ಟು ನಗರಗಳತ್ತ ವಲಸೆ ಹೋಗುತ್ತಿದ್ದಾರೆ ಎಂದರು. ಇದು ಭಾರತದ ಸಮಸ್ಯೆ ಮಾತ್ರ ಅಲ್ಲ. ಬ್ರೆಜಿಲ್, ಚೀನಾ, ಉತ್ತರ ಕೋರಿಯಾ, ಉತ್ತರ ಅಮೇರಿಕ, ದಕ್ಷಿಣ ಅಮೇರಿಕ ಸೇರಿದಂತೆ ಬಹುತೇಕ ದೇಶಗಳಲ್ಲಿ ಕೃಷಿ ವಿಮುಖತೆ ಆರಂಭವಾಗಿದೆ. ರೈತರಿಗೆ ಅಷ್ಟೇ ಅಲ್ಲ. ರೈತರ ಮಕ್ಕಳಿಗೂ ಕೃಷಿಯ ಬಗ್ಗೆ ನಿರಾಸಕ್ತಿ ಬರುತ್ತಿದೆ. ಈಗಾಗಲೇ ನಗರ ಪ್ರದೇಶಗಳತ್ತ ವಲಸೆ ಹೆಚ್ಚುತ್ತಿದೆ. ಕೃಷಿಯನ್ನು ಲಾಭದಾಯಕವಾಗಿಸದ ಹೊರತು ವಲಸೆಯನ್ನು ನಿಯಂತ್ರಣ ಮಾಡಲು ಸಾಧ್ಯವಿಲ್ಲ ಎಂದರು.

ಅದಕ್ಕಾಗಿ ಉಪಕಸುಬನ್ನು ಹೆಚ್ಚಾಗಿ ಪ್ರೋತ್ಸಾಹಿಸಬೇಕು. ಕೃಷಿಯ ಯಂತ್ರೋಪಕರಣಗಳನ್ನು ಕೃಷಿಯ ಜತೆಗೆ ಕೃಷಿಯೇತರ ಚಟುವಟಿಕೆಗೆ ಬಳಸುವುದನ್ನು ಕಲಿಸಬೇಕು ಎಂದು ತಿಳಿಸಿದರು.  ಆವಿಷ್ಕಾರ ಮತ್ತು ಸಂಶೋಧನೆಗಳು ರೈತರಿಗೆ ಪ್ರಯೋಜನಕಾರಿಯಾಗಿರಬೇಕು. ಆಗ ಕೃಷಿ ಲಾಭದಾಯಕವಾಗಲು ಸಾಧ್ಯ. ಭಾರತದಲ್ಲಿ 10ಲಕ್ಷ ಜನರಿಗೆ ಒಬ್ಬ ಕೃಷಿ ವಿಜ್ಞಾನಿ ಇದ್ದಾನೆ. ವಿಜ್ಞಾನಿಗಳ ಸಂಖ್ಯೆ ಹೆಚ್ಚಿಸಬೇಕು. ಅದಕ್ಕಾಗಿ ಕೃಷಿಯನ್ನು ಉನ್ನತ ಶಿಕ್ಷಣವೆಂದು ಪರಿಗಣಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಜತೆಗೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲೂ ಕೃಷಿಯ ಬಗ್ಗೆ ಮಾಹಿತಿಗಳನ್ನು ಅಳವಡಿಸಬೇಕು. ಕೃಷಿಯ ಬಗ್ಗೆ ಆಕರ್ಷಣೆ ಹೆಚ್ಚಿಸಬೇಕು ಎಂದು ಹೇಳಿದರು.

ಪ್ರಸ್ತುತ ದೇಶದಲ್ಲಿ 285ಮಿಲಿಯನ್ ಟನ್ ಆಹಾರ ಉತ್ಪಾದನೆಯಾಗುತ್ತಿದೆ. ಇದು 2050ರವೇಳೆಗೆ ಜನಸಂಖ್ಯೆಗೆ ಅನುಗುಣವಾಗಿ ದುಪ್ಪಟ್ಟಾಗಲಿದೆ. ಆಹಾರ ಉತ್ಪಾದನೆಯನ್ನು ಹೆಚ್ಚಿಸುವ ಸವಾಲನ್ನು ಸ್ವೀಕರಿಸದೇ ಇದ್ದರೆ ಹಸಿವಿನ ಸಂಕಟ ಹೆಚ್ಚಾಗಲಿದೆ ಎಂದು ಎಚ್ಚರಿಸಿದರು. ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ವೆಂಕಟಾಚಲಯ್ಯ ಮಾತನಾಡಿ, ದೇಶದ 8ರಾಜ್ಯಗಳಲ್ಲಿ ಜಾಗತಿಕ ಸರಾಸರಿ ಮಟ್ಟಕ್ಕಿಂತಲೂ ಹೆಚ್ಚು ಬಡತನವಿದೆ. ವಸತಿ, ಹಣದ ಸಮಸ್ಯೆ ಅಷ್ಟೇ ಅಲ್ಲ ಆಹಾರದ ಕೊರತೆಯೂ ಬಡತನಕ್ಕೆ ಕಾರಣ. ಕೃಷಿಯ ಮೂಲಕ ಈ ಕೊರತೆಯನ್ನು ನಿವಾರಿಸಲು ಸಾಧ್ಯವಿದೆ. ಇದಕ್ಕೆ ಹೆಚ್ಚು ಸಂಶೋಧನೆ ನಡೆಯಬೇಕು ಎಂದರು.

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ದೊರೆಯುತ್ತಿರುವ ತೈಲಸಂಪತ್ತು 2050ರ ವೇಳೆಗೆ ಮುಗಿದು ಹೋಗುವ ಆತಂಕವಿದೆ. ಅದಕ್ಕಾಗಿ ನೈಸರ್ಗಿಕ ಮತ್ತು ನವೀಕೃತ ಇಂಧನ ಮೂಲಗಳತ್ತ ಹೆಚ್ಚು ಗಮನ ಹರಿಸಬೇಕು. ಇದರಿಂದ ರೈತರ ಆದಾಯವೂ ಹೆಚ್ಚಾಗಲಿದೆ ಎಂದು ಹೇಳಿದರು. ಅದಮ್ಯ ಚೇತನದ ಮುಖ್ಯಸ್ಥೆ ತೇಜಸ್ವಿನಿಅನಂತ್‍ಕುಮಾರ್ ಮಾತನಾಡಿ, ತಮ್ಮ ಸಂಸ್ಥೆ 2003ರಲ್ಲಿ 50ಶಾಲೆಗಳಿಗೆ ಬಿಸಿಯೂಟ ಪೂರೈಸುವ ಯೋಜನೆ ಕೈಗೊಂಡಾಗ ಅಡುಗೆ ತಯಾರಿಸಲು 50 ಸಿಲೆಂಡರ್‍ಗಳನ್ನು ಬಳಸಲಾಗುತ್ತಿತ್ತು. ಈಗ ಒಂದೂವರೆ ಲಕ್ಷ ಜನರಿಗೆ ಬಿಸಿಯೂಟ ಪೂರೈಕೆ ಮಾಡಲಾಗುತ್ತಿದೆ.

ಗ್ಯಾಸ್ ಸಿಲೆಂಡರ್‍ಗಳನ್ನೇ ಬಳಸಿದ್ದರೆ ನೂರಾರು ಸಿಲೆಂಡರ್‍ಗಳನ್ನು ಬಳಸಬೇಕಿತ್ತು. ಆದರೆ, ನಮ್ಮ ಸಂಸ್ಥೆ ಬಯೋಗ್ಯಾಸ್ ಉತ್ಪಾದನೆಯನ್ನು ಮಾಡುತ್ತಿದೆ. ಇದರಿಂದಾಗಿ ಒಂದೂ ಸಿಲೆಂಡರ್‍ಗಳನ್ನು ಬಳಕೆ ಮಾಡದೆ ಆಹಾರ ಉತ್ಪಾದಿಸಲಾಗುತ್ತದೆ. ಹಳ್ಳಿಗಳಿಗೂ ತೆರಳಿ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ. ಆಹಾರ ವ್ಯರ್ಥವಾಗುವುದನ್ನು ತಪ್ಪಿಸಲು ಹೆಚ್ಚು ಕಾಳಜಿ ವಹಿಸಲಾಗುತ್ತಿದೆ ಎಂದು ಹೇಳಿದರು.ಕೃಷಿ ವಿವಿಯ ವಿಶ್ರಾಂತ ಕುಲಪತಿ ಕೆ.ನಾರಾಯಣಗೌಡ,  ಆಹಾರ ಆಯೋಗದ ಅಧ್ಯಕ್ಷ ಡಾ.ಎನ್.ಕೃಷ್ಣಮೂರ್ತಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Sri Raghav

Admin