ಉನ್ನತ ಹುದ್ದೆಗೇರಲು ಗ್ರಾಮೀಣರಲ್ಲಿ ಮಾಹಿತಿ ಕೊರತೆ
ಹುಳಿಯಾರು,ಸೆ.17- ಗ್ರಾಮೀಣ ಪ್ರದೇಶದ ಬಹುತೇಕ ಪ್ರತಿಭಾವಂತ ವಿದ್ಯಾರ್ಥಿಗಳು ಟಿಸಿಎಚ್, ನರ್ಸಿಂಗ್ ಓದಿದರೆ ಮಾತ್ರ ಉದ್ಯೋಗ ಎನ್ನುವಂತಾಗಿದ್ದಾರೆ. ಹಾಗಾಗಿಯೇ ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದರೂ ಜಿಲ್ಲಾಧಿಕಾರಿ, ತಹಸೀಲ್ದಾರ್ ಆಗ್ತಿಲ್ಲ ಎಂದು ತುಮಕೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಸಾಸಲು ಸತೀಶ್ ಅಭಿಪ್ರಾಯಪಟ್ಟರು.ಹಂದನಕೆರೆ ಹೋಬಳಿ ಕೆಂಗಲಾಪುರದ ಭೀಮಾನಾಯ್ಕನ ತಾಂಡ್ಯದಲ್ಲಿ ಚಂದನ್ ಪ್ರತಿಷ್ಠಾನ ಟ್ರಸ್ಟ್ನಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ಸಮವಸ್ತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶಿಕ್ಷಕರು ಉನ್ನತ ಉದ್ಯೋಗಗಳ ಬಗ್ಗೆ ಮಾಹಿತಿ ನೀಡಬೇಕು. ಅವರಲ್ಲಿ ಉನ್ನತ ಉದ್ಯೋಗಗಳ ಕನಸು, ಗುರಿ ಮತ್ತು ಛಲ ಬಿತ್ತಬೇಕು. ಇಂದಿನ ಪ್ರತಿಭಾ ಪುರಸ್ಕಾರದಲ್ಲಿ ಶೆ.95ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿದ್ದಾರೆ. ಇದರರ್ಥ ಹಳ್ಳಿಗಳಲ್ಲಿ ಪ್ರತಿಭೆಗಳಿವೆಯಾದರೂ ಸೂಕ್ತ ಮಾರ್ಗದರ್ಶನವಿಲ್ಲದೆ ಉನ್ನತ ಉದ್ಯೋಗಗಳು ಪಟ್ಟಣ ಪ್ರದೇಶದ ವಿದ್ಯಾರ್ಥಿಗಳ ಪಾಲಾಗುತ್ತಿವೆ ಎಂದು ವಿಷಾದಿಸಿದರು. 8 ವರ್ಷಗಳಿಂದ ಚಂದನ ಟ್ರಸ್ಟ್ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಹಣವಂತರಿಗೆ ಮಾದರಿಯಾಗಿದೆ. ಇಂತಹ ಸೇವಾ ಕಾರ್ಯಗಳ ಸ್ಪೂರ್ತಿಯಿಂದ ಹಣವಂತರು ಅಬಲರಿಗೆ ನೆರವು ನೀಡುವಂತೆ ಪ್ರೇರೇಪಿಸುತ್ತದೆ ಎಂದರು.
ಟ್ರಸ್ಟ್ ಅಧ್ಯಕ್ಷ ಜಿ.ಗುರುನಾಥ್ ಮಾತನಾಡಿ, ನನ್ನ ಪ್ರೀತಿಯ ಮಗ ಚಂದನ್ ಅಕಾಲಿಕ ಮರಣಕ್ಕೆ ತುತ್ತಾದ. ಸಮಾಜದ ಮಕ್ಕಳ ಶ್ರೇಯೋಭಿವೃದ್ಧಿಯಲ್ಲಿ ನನ್ನ ಮಗನನ್ನು ನೋಡುವ ಸಲುವಾಗಿ 8 ವರ್ಷಗಳಿಂದ ಸಮಾಜಸೇವೆಯಲ್ಲಿ ತೊಡಗಿದ್ದೇನೆ. ಆದರೆ ಕೆಲವರು ಈ ಕಾರ್ಯಕ್ಕೆ ರಾಜಕೀಯ ಬಣ್ಣ ಕುಟ್ಟುತ್ತಿರುವುದು ನೋವು ತಂದಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ, ಎಸ್ಡಿಎಂಸಿ ಅಧ್ಯಕ್ಷ ದೇವರಾಜು , ಸಿದ್ಧಾರ್ಥ ವೈದ್ಯಕೀಯ ಕಾಲೇಜು ಪ್ರಾಚಾರ್ಯ ಡಾ.ಎ.ಜಿ.ಶ್ರೀನಿವಾಸ್, ಜಿಪಂ ಮಾಜಿ ಅಧ್ಯಕ್ಷ ಜಿ.ರಘುನಾಥ್, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ರಘುನಾಥ್, ಡಾ.ಬಿ.ಎಲ್.ಸುನೀತ ಮತ್ತಿತರರು ಇದ್ದರು.