ಉಭಯ ಸದನಗಳಲ್ಲಿ ಕಪ್ಪ ಕಾಣಿಕೆ ಡೈರಿ ಕದನ, ಸಿಬಿಐಗೆ ತನಿಖೆಗೆ ಬಿಜೆಪಿ ಪಟ್ಟು

Session-BJP-m

ಬೆಂಗಳೂರು, ಮಾ.16-ಉಭಯ ಸದನಗಳಲ್ಲಿ ಹೈಕಮಾಂಡ್‍ಗೆ ನೀಡಿರುವ ಕಪ್ಪ ಕಾಣಿಕೆ ಡೈರಿ ಪ್ರಕರಣ ಪ್ರತಿಧ್ವನಿಸಿದೆ. ಎರಡೂ ಸದನದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಡೈರಿ ಕಾಳಗ ಜೋರಾಗಿಯೇ ನಡೆದಿದೆ. ಮೇಲ್ಮನೆಯಲ್ಲಿ ಪ್ರತಿಪಕ್ಷ ಬಿಜೆಪಿ ಡೈರಿ ಪ್ರಕರಣವನ್ನು ಸಿಬಿಐಗೆ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಸಭಾತ್ಯಾಗ ಮಾಡಿದರೆ, ವಿಧಾನಸಭೆಯಲ್ಲಿ ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೊಡಬೇಕೆಂದು ಕೋರಿ ಪ್ರತಿಪಕ್ಷಗಳು ಪಟ್ಟು ಹಿಡಿದಿದ್ದು, ನಿಯಮ 69ರಡಿ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ನೀಡಿದ್ದ ಅನುಮತಿಯನ್ನು ಹಿಂಪಡೆದ ಪರಿಣಾಮ ಸಭಾಧ್ಯಕ್ಷರ ಧೋರಣೆ ಖಂಡಿಸಿ ಬಿಜೆಪಿ ಸದಸ್ಯರು ಬಾವಿಗಿಳಿದು ಪ್ರತಿಭಟನೆ ನಡೆಸಿದಾಗ ಸಭೆಯನ್ನು ಕೆಲ ಕಾಲ ಮುಂದೂಡಬೇಕಾದ ಪರಿಸ್ಥಿತಿ ನಿರ್ಮಾಣವನ್ನು ಈ ಡೈರಿ ಹಗರಣ ಸೃಷ್ಟಿಸಿತು.

ಮೇಲ್ಮನೆಯಲ್ಲಿ ಪ್ರತಿಪಕ್ಷ ಬಿಜೆಪಿ ಡೈರಿ ಪ್ರಕರಣವನ್ನು ಹಿಡಿದು ಆಡಳಿತ ಪಕ್ಷದ ಮೇಲೆ ಹರಿಹಾಯ್ದರೆ ಅದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದವರು ಲೇಹರ್ ಸಿಂಗ್ ಡೈರಿಯನ್ನು ಪ್ರದರ್ಶಿಸಿ ಪ್ರತಿಪಕ್ಷದವರ ಮೇಲೆ ವಾಗ್ದಾಳಿ ನಡೆಸಿದರು.  ಈ ಪ್ರಕರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ರೂಲಿಂಗ್ ನೀಡಿರುವುದನ್ನು ವಿರೋಧಿಸಿ ಬಿಜೆಪಿ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ಇದಕ್ಕೂ ಮುನ್ನ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ, ಪರಸ್ಪರ ಕೆಸರೆರಚಾಟ ನಡೆಯಿತು. ಇದೇ ಪರಿಸ್ಥಿತಿ ಕೆಳಮನೆಯಲ್ಲೂ ಉಂಟಾಯಿತು.

ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಪೂರ್ವಭಾವಿ ಪ್ರಸ್ತಾಪಕ್ಕೆ ಮುಂದಾದಾಗ ಸಚಿವ ಟಿ.ಬಿ.ಜಯಚಂದ್ರ ಕ್ರಿಯಾಲೋಪವೆತ್ತಿದರು.  ಮಧ್ಯಪ್ರವೇಶಿದ ರಮೇಶ್‍ಕುಮಾರ್ ಚರ್ಚೆಗೆ ಅವಕಾಶ ನೀಡಲು ಸಾಧ್ಯವೇ ಇಲ್ಲ ಎಂಬುದನ್ನು ಸ್ಪೀಕರ್ ಗಮನಕ್ಕೆ ತಂದಾಗ ತಮ್ಮ ಆದೇಶವನ್ನು ತಾವೇ ಹಿಂದಕ್ಕೆ ಪಡೆದಿದ್ದು, ಪ್ರತಿಪಕ್ಷವನ್ನು ಕೆರಳಿಸಿತು. ಪ್ರತಿಭಟನೆಗೆ ಮುಂದಾದಾಗ ಸದನವನ್ನು ಕೆಲಕಾಲ ಮುಂದೂಡಿದರು. ಒಟ್ಟಾರೆ ಡೈರಿ ಅರ್ಧದಿನದ ಕಲಾಪವನ್ನು ನುಂಗಿಹಾಕಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Sri Raghav

Admin