ಉಭಯ ಸದನಗಳಲ್ಲಿ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ಜೆಡಿಎಸ್ ನಿರ್ಧಾರ

Suvarna-Soudha-0003
ಬೆಳಗಾವಿ, ನ.22- ರಾಜ್ಯವನ್ನು ಕಾಡುತ್ತಿರುವ ಬರ, ಕುಡಿಯುವ ನೀರು, ಜಾನುವಾರುಗಳ ಮೇವಿನ ಸಮಸ್ಯೆ ಸೇರಿದಂತೆ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಪ್ರಸ್ತಾಪಿಸಲು ಇಂದು ನಡೆದ ಜೆಡಿಎಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇಂದು ಮಧ್ಯಾಹ್ನ ಸುವರ್ಣ ಸೌಧದಲ್ಲಿ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಸತತ ಬರದಿಂದ ರಾಜ್ಯದ ಗ್ರಾಮೀಣ ಭಾಗದ ಜನರು ಕುಡಿಯುವ ನೀರು ವಿದ್ಯುತ್ ಅಭಾವ, ಜಾನುವಾರುಗಳ ಮೇವಿನ ಸಮಸ್ಯೆಯಿಂದ ತತ್ತರಿಸಿದ್ದಾರೆ. ಈ ವಿಚಾರವನ್ನು ಆದ್ಯತೆ ಮೇರೆಗೆ ಉಭಯ ಸದನಗಳಲ್ಲಿ ಪ್ರಸ್ತಾಪಿಸಲು ತೀರ್ಮಾನಿಸಲಾಗಿದೆ.

500 ಹಾಗೂ 1000 ರೂ. ಮುಖ ಬೆಲೆಯ ನೋಟುಗಳ ನಿಷೇಧದಿಂದ ರೈತ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ಮಾಡಲು ನಿರ್ಧರಿಸಲಾಗಿದೆ.
ನೋಟು ನಿಷೇಧದಿಂದಾಗಿ ಹಾಲು ಉತ್ಪಾದಕರು, ಸ್ತ್ರೀಶಕ್ತಿ ಸಂಘಗಳು ಹಾಗೂ ರೈತರ ವ್ಯವಹಾರಕ್ಕೆ ಧಕ್ಕೆಯುಂಟಾಗಿದೆ. ಈ ವಿಚಾರದ ಬಗ್ಗೆ ಉಭಯ ಸದನಗಳಲ್ಲಿ ಸರ್ಕಾರದ ಗಮನ ಸೆಳೆಯಬೇಕು, ವಿವಾದಿತ ಮಹದಾಯಿ ಯೋಜನೆ ಬಗ್ಗೆಯೂ ಗಂಭೀರ ಚರ್ಚೆ ನಡೆಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ತೀರ್ಮಾನ ಮಾಡಲಾಗಿದೆ. ಪ್ರಮುಖವಾಗಿ ರೈತರ ಬೆಳೆ ಸಾಲ ಮನ್ನಾಕ್ಕೆ ಪಟ್ಟು ಹಿಡಿದು ವಿಧಾನಸಭೆ ಹಾಗೂ ವಿಧಾನಪರಿಷತ್‍ನಲ್ಲಿ ಒತ್ತಾಯಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ.

ಇದೇ ರೀತಿ ನಾಡಿನ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಬಗ್ಗೆ ಆದ್ಯತೆ ನೀಡಿ ಸದನದಲ್ಲಿ ವಿಷಯ ಪ್ರಸ್ತಾಪಿಸಿ ಸರ್ಕಾರಿದಂದ ಸೂಕ್ತ ಉತ್ತರ ಪಡೆಯಲು ತೀರ್ಮಾನಿಸಲಾಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.

► Follow us on –  Facebook / Twitter  / Google+

Sri Raghav

Admin