ಉರಿ ಎಫೆಕ್ಟ್ : ಪಾಕ್ ಜೊತೆಗಿನ ಭಾರತದ ಸಿಂಧೂ ನದಿ ಒಪ್ಪಂದ ರದ್ದು..?
ನವದೆಹಲಿ/ಇಸ್ಲಾಮಾಬಾದ್, ಸೆ.23- ಜಮ್ಮು ಮತ್ತು ಕಾಶ್ಮೀರದ ಉರಿಯಲ್ಲಿ ಉಗ್ರರಿಂದ ದಾಳಿ ನಡೆದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ನೀಡುವ ಸಿಂಧೂನದಿ ನೀರಿನ ಪಾಲನ್ನು ಕಡಿತ ಮಾಡುವ ಸಾಧ್ಯತೆ ಇದೆ. ಉಗ್ರರನ್ನು ಮಟ್ಟಹಾಕುವ ಬಗ್ಗೆ ಈ ಹಿಂದಿನ ವಾಗ್ದಾನ ಪೂರೈಸದೆ ಇದ್ದರೆ ಈ ನಿಲುವನ್ನು ಜಾರಿ ಮಾಡುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ ಎಂದು ವರದಿಯಾಗಿದೆ. ಈ ಬಗ್ಗೆ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ರ ಸುದ್ದಿಗೋಷ್ಠಿಯಲ್ಲಿಯೂ ಪ್ರಸ್ತಾಪ ಮಾಡಿದ್ದಾರೆ. ಸಹಕಾರ ಎನ್ನುವುದು ಎರಡೂ ಕಡೆಗಳಿಂದ ನಡೆಯಬೇಕು ಎಂದು ಸ್ವರೂಪ್ ಹೇಳಿದಾಗ ಪತ್ರಕರ್ತರು ಯಾವ ರೀತಿಯ ಕ್ರಮ ಎಂದು ವಿಶೇಷವಾಗಿ ಕೇಳಿದಾಗ ಸಿಂಧೂ ನದಿ ಒಪ್ಪಂದ ರದ್ದು ಮಾಡುವ ಅಂಶವೂ ಪರಿಶೀಲನೆಯಲ್ಲಿದೆ ಎಂದು ಹೇಳಿದರು.
1960ರಲ್ಲಿ ಭಾರತ ಮತ್ತು ಪಾಕಿಸ್ತಾನ ನದಿ ನೀರಿನ ಹಂಚಿಕೆ ಬಗ್ಗೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಅದರ ಪ್ರಕಾರ ಶೇ.20ರಷ್ಟು ನೀರನ್ನು ಮಾತ್ರ ಭಾರತಕ್ಕೆ ಉಪಯೋಗಿಸಲು ಅವಕಾಶ ಉಂಟು. ಒಂದು ವೇಳೆ ನೀರು ಪೂರೈಕೆಯನ್ನು ಭಾರತ ಸರ್ಕಾರ ರದ್ದು ಮಾಡಿದರೆ ಪಾಕಿಸ್ತಾನದಲ್ಲಿ ಭಾರೀ ಹಾಹಾಕಾರ ಉಂಟಾಗಲಿದೆ ಎಂದು ಹೇಳಲಾಗಿದೆ. ಪಿಒಕೆ ಸೇರಿದಂತೆ ಪಾಕ್ನ ಉತ್ತರ ಭಾಗದಲ್ಲಿ ವಾಯು ನೆಲೆಗಳ ಮುಚ್ಚುವಿಕೆ ಮತ್ತು ಪಾಕಿಸ್ತಾನ ವಾಯು ಸೇನೆ (ಪಿಎಎಫ್)ಯ ಜೆಟ್ ವಿಮಾನಗಳ ಅಭ್ಯಾಸ ಕುರಿತು ಅಲ್ಲಿನ ಮಾಧ್ಯಮಗಳಲ್ಲಿ ವರದಿಗಳಾಗಿವೆ. ಪಾಕ್ ವಾಯುಸೇನೆಯ ಜೆಟ್ ವಿಮಾನಗಳು ಅಲ್ಲಿನ ಹೆದ್ದಾರಿಯೊಂದರಲ್ಲಿ ಭೂಸ್ಪರ್ಷ ಮಾಡಿದ ಹಾಗೂ ಹಾರಾಟ ನಡೆಸಿರುವ ಬಗ್ಗೆ ಮಾಧ್ಯಮ ವರದಿಗಳು ತಿಳಿಸಿವೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಐಎಸ್ಐ ನಿರಾಕರಿಸಿದ್ದು, ಅಂಥ ಬೆಳವಣಿಗೆಯೇ ನಡೆದಿಲ್ಲ ಎಂದು ಪ್ರತಿಪಾದಿಸಿದೆ. ವಿಶ್ವಾದ್ಯಂತ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿ ಪ್ರಕಟವಾಗುತ್ತಿದ್ದಂತೆ ಕರಾಚಿ ಸ್ಟಾಕ್ಎಕ್ಸ್ಚೇಂಜ್ನಲ್ಲಿ ವಹಿವಾಟು ಏರುಪೇರು ಉಂಟಾಯಿತು.
ಕಣಿವೆ ರಾಜ್ಯದಲ್ಲಿ ನಡೆಯುವ ಬೀದಿ ಪ್ರತಿಭಟನೆಗಳ ವೇಳೆ ಪೆಲೆಟ್ ಗನ್ ಬಳಕೆಗೆ ನಿಷೇಧ ಹೇರುವಂತೆ ಕೋರಲಾದ ಅರ್ಜಿಯನ್ನು ಜಮ್ಮು-ಕಾಶ್ಮೀರ ಹೈಕೋರ್ಟ್ ತಿರಸ್ಕರಿಸಿದೆ. ನಿಯಂತ್ರಣಕ್ಕೆ ಸಿಗದ ಗುಂಪುಗಳಿಂದ ಕಾಶ್ಮೀರದ ಬೀದಿಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಹಾಗೂ ವಾಸ್ತವ ಸ್ಥಿತಿಯನ್ನು ಪರಿಗಣಿಸಿ ಕೋರ್ಟ್ ಈ ನಿರ್ಣಯಕ್ಕೆ ಬಂದಿದೆ. ಪೈಲೆಟ್ ಗನ್ ಬಳಕೆ ಮಾಡಿರುವ ಅಧಿಕಾರಿಗಳ ವಿರುದ್ಧ ವಿಚಾರಣೆ ನಡೆಸುವಂತೆ ಕೋರಿದ ಅರ್ಜಿಯನ್ನೂ ನ್ಯಾಯಮೂರ್ತಿಗಳಾದ ಎನ್ ಪೌಲ್ ವಸಂತ ಕುಮಾರ್ ಮತ್ತು ಅಲಿ ಮುಹಮ್ಮದ್ ಮಾಗ್ರೆ ನ್ಯಾಯಪೀಠ ತಳ್ಳಿಹಾಕಿದೆ.