ಎಂಇಎಸ್ ಸಂಘಟನೆ ನಿಷೇಧಿಸುವಂತೆ ನಾರಾಯಣಗೌಡ ಆಗ್ರಹ

Spread the love

narayanagowda

ಬೆಂಗಳೂರು,ನ.3-ರಾಜ್ಯೋತ್ಸವದ ದಿನದಂದು ಬೆಳಗಾವಿಯಲ್ಲಿ ಕರಾಳ ದಿನಾಚರಣೆ ಮಾಡಿ ನಾಡ ವಿರೋಧಿ ಕೆಲಸ ಮಾಡುತ್ತಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸಬೇಕು ಹಾಗೂ ಸಂಘಟನೆಯ ಮುಖಂಡರನ್ನು ಬಂಧಿಸಬೇಕು, ಬೆಳಗಾವಿ ನಗರ ಪಾಲಿಕೆಯನ್ನು ವಿಸರ್ಜನೆ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಸರ್ಕಾರವನ್ನು ಆಗ್ರಹಿಸಿದರು.ನಗರದ ಟೌನ್‍ಹಾಲ್‍ನಿಂದ ಪುರಭವನದವರೆಗೆ ಎಂಇಎಸ್ ವಿರುದ್ದ ಹಮ್ಮಿಕೊಂಡಿದ್ದ ಬೃಹತ್ ಕಾಲ್ನಡಿಗೆ ಜಾಥಾದಲ್ಲಿ ಮಾತನಾಡಿದ ಅವರು, ಕರ್ನಾಟಕ ಏಕೀಕರಣದ ಸವಿನೆನಪಿಗಾಗಿ ಪ್ರತಿ ವರ್ಷ ನವೆಂಬರ್ 1ರಂದು ಕನ್ನಡ ರಾಜ್ಯೋತ್ಸವ ರಾಜ್ಯಾದ್ಯಂತ ಆಚರಿಸಲಾಗುತ್ತದೆ. ಆದರೆ ಎಂಇಎಸ್ ಸಂಘಟನೆಯವರು ಅಂದು ಕರಾಳ ದಿನ ಆಚರಿಸುವ ಮೂಲಕ ಕನ್ನಡಿಗರಿಗೆ ಹಾಗೂ ಕರ್ನಾಟಕ ಸರ್ಕಾರಕ್ಕೆ ಸವಾಲೊಡ್ಡುವ ಕುತಂತ್ರದ ಕೆಲಸ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನ.1ರಂದು ಹಮ್ಮಿಕೊಂಡಿದ್ದ ಜಾಥಾದಲ್ಲಿ ಬೆಳಗಾವಿ ಮೇಯರ್ ಸರಿತಾ ಪಾಟೀಲ, ಉಪಮೇಯರ್ ಸಂಜಯ ಸಿಂಧೆ ಹಾಗೂ ಕೆಲ ನಗರಪಾಲಿಕೆ ಸದಸ್ಯರು ಭಾಗವಹಿಸಿದ್ದಾರೆ. ಕೆಲವರು ಬಂದೂಕು ಹಿಡಿದು ಭಯದ ವಾತಾವರಣವನ್ನು ಸೃಷ್ಟಿ ಮಾಡಿದ್ದಾರೆ. ಇಂತಹ ನಾಡ ವಿರೋಧಿ ನಿರ್ಣಯವನ್ನು ತೆಗೆದುಕೊಂಡ ಬೆಳಗಾವಿ ಮಹಾನಗರಪಾಲಿಕೆಯನ್ನು ತಕ್ಷಣ ವಿಸರ್ಜಿಸಬೇಕು ಎಂದು ನಾರಾಯಣಗೌಡ ಒತ್ತಾಯಿಸಿದರು. ಕನ್ನಡದ ಬಾವುಟವನ್ನು ಹರಿದು ಎಂಇಎಸ್ ಸಂಘಟನೆಯವರ ನೀಚತನ ಪ್ರದರ್ಶಿಸಿದ್ದಾರೆ. ಕೂಡಲೇ ಈ ಸಂಘಟನೆಯನ್ನು ನಿಷೇಧಿಸಬೇಕು ಸಂಘಟನೆಯ ಮುಖಂಡರನ್ನು ಬಂಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಅವರು ಆಗ್ರಹಿಸಿದರು. ಒಂದು ವೇಳೆ ಎಂಇಎಸ್ ವಿರುದ್ಧ ಕ್ರಮ ಕೈಗೊಳ್ಳದೇ ಹೋದರೆ ಸರ್ಕಾರ ಉಗ್ರ ಹೋರಾಟವನ್ನು ಎದುರಿಸ ಬೇಕಾಗುತ್ತದೆ ಎಂದು ಕರವೇ ಎಚ್ಚರಿಕೆ ನೀಡಿತು.

► Follow us on –  Facebook / Twitter  / Google+

Facebook Comments

Sri Raghav

Admin