ಎಂಪಿ ಅಹ್ಮದ್ ಸಾವಿನ ಪ್ರಕರಣ : ವಿಪಕ್ಷ ಗದ್ದಲ, ಲೋಕಸಭೆ ಕಲಾಪ ಮುಂದೂಡಿಕೆ
ನವದೆಹಲಿ, ಫೆ.6-ಹೃದಯಸ್ತಂಭನದಿಂದ ಸಂಸತ್ ಭವನದಲ್ಲಿ ನಿಧನರಾದ ಸಂಸದ ಇ.ಅಹ್ಮದ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ನಡೆದುಕೊಂಡ ರೀತಿಯ ವಿರುದ್ಧ ವಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಗದ್ದಲ ಎಬ್ಬಿಸಿದ್ದರಿಂದ ಲೋಕಸಭೆಯ ಕಲಾಪವನ್ನು ಮುಂದೂಡಬೇಕಾಯಿತು. ವಿಪಕ್ಷಗಳ ಈ ಗದ್ದಲದಿಂದ ಅಸಮಾಧಾನಗೊಂಡ ಸ್ಪೀಕರ್ ಸುಮಿತ್ರಾ ಮಹಾಜನ್ ಕಲಾಪವನ್ನು 50 ನಿಮಿಷಗಳ ಕಾಲ ಮುಂದೂಡಿದರು. ಸದನದಲ್ಲಿ ಪ್ರಶ್ನೋತ್ತರ ವೇಳೆ ಆರಂಭವಾಗುತ್ತಿದ್ದಂತೆ ಕೇರ ಳ ಸಂಸದರು, ಕಾಂಗ್ರೆಸ್ ಹಾಗೂ ಎಡಪಕ್ಷಗಳ ಸದಸ್ಯರು, ಲೋಕಸಭಾ ಸದಸ್ಯ ಮತ್ತು ಐಯುಎಂಎಲ್ನ ಹಿರಿಯ ನಾಯಕ ಇ.ಅಹ್ಮದ್ ಅವರ ಸಾವಿನ ಕುರಿತಂತೆ ಸರ್ಕಾರ ಅನುಸರಿಸಿದ ನೀತಿ ಅಕ್ಷಮ್ಯ ಎಂದು ಆರೋಪಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ಫಲಕಗಳನ್ನು ಹಿಡಿದು ಸದನದ ಬಾವಿಗೆ ನುಗ್ಗಿ ಗಲಾಟೆ ಮಾಡಿದರು.
ಸದನದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಅಹ್ಮದ್ ಅವರು ಆರ್ಎಂಎಲ್ ಆಸ್ಪತ್ರೆಗೆ ಸಾಗಿಸುತ್ತಿದ್ದಂತೆಯೇ ಕೊನೆಯುಸಿರೆಳೆದರು. ಆದರೆ ಸರ್ಕಾರ ಅದನ್ನು ತುಂಬಾ ತಡವಾಗಿ ಪ್ರಚುರಪಡಿಸಿತು. ಇದರ ಹಿಂದಿನ ರಹಸ್ಯವೇನು ಎಂದು ವಿಪಕ್ಷ ಸದಸ್ಯರು ಪ್ರಶ್ನಿಸಿದರು. ಘೋಷಣೆಗಳನ್ನು ಕೂಗುವುದು ನಿಲ್ಲದಿದ್ದಾಗ ಬೇಸರಗೊಂಡ ಸುಮಿತ್ರಾ ಮಹಾಜನ್ ಕಲಾಪ ಮುಂದೂಡಿದರು.
< Eesanje News 24/7 ನ್ಯೂಸ್ ಆ್ಯಪ್ >