ಎಐಎಡಿಎಂಕೆಯಲ್ಲಿ 2 ಬಣ : ಪಕ್ಷದ ಉಸ್ತುವಾರಿಗೆ ಜಯಾ ಸಂಬಂಧಿಗೆ ಬೆಂಬಲ

Deepa-Jayalalithaa

ಚೆನ್ನೈ,ಡಿ.15-ತಮಿಳುನಾಡು ಮುಖ್ಯಮಂತ್ರಿ ದಿ. ಜಯಲಲಿತ ನಿಧನದ ಬಳಿಕ ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದೆ.   ಜಯಲಲಿತ ಅವರ ಆಪ್ತೆ ಶಶಿಕಲಾ ನಟರಾಜನ್ ಅವರು ಎಐಎಡಿಎಂಕೆ ಪಕ್ಷದ ಸಾರಥ್ಯ ವಹಿಸಿ ಮುಂದಾಗುತ್ತಿದ್ದಂತೆ ಅದೇ ಪಕ್ಷದ ಮತ್ತೊಂದು ಬಣ ಶಶಿಕಲಾ ವಿರುದ್ಧ ತೊಡೆ ತಟ್ಟಿ ನಿಂತಿದೆ.  ಜಯಲಲಿತ ಅವರ ಸಂಬಂಧಿಕರಾದ ಜೆ.ದೀಪ ಅವರು ಪಕ್ಷದ ಅಧ್ಯಕ್ಷತೆಯನ್ನು ವಹಿಸಿ ಕೊಳ್ಳಬೇಕೆಂದು ಕಾರ್ಯಕರ್ತರು ಚೆನ್ನೈ ಸೇರಿ ರಾಜ್ಯಾದ್ಯಂತ ಬಿರುಸಿನ ಪ್ರಚಾರ ಮಾಡುತ್ತಿದ್ದಾರೆ. ಈಗಾ ಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಶಶಿಕಲಾ ಅಥವಾ ಜೆ.ದೀಪ ಅವರು ಪಕ್ಷದ ಉಸ್ತುವಾರಿ ಯನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬ ಯಕ್ಷ ಪ್ರಶ್ನೆ ಕಾಡುತ್ತಿದೆ.

ಶಶಿಕಲಾ ವಿರುದ್ಧ ರಣತಂತ್ರ ರೂಪಿಸಲು ಎಐಎಡಿಎಂಕೆಯ ಮತ್ತೊಂದು ಬಣ ಸಿದ್ದವಾಗಿದ್ದು , ಈಗಾಗಲೇ ಅಲ್ಲಿ ದೀಪಾ ಅವರಿಗೆ ಬೆಂಬಲ ನೀಡುವಂತೆ ತಮ್ಮ ಪಕ್ಷದ ಸಂಸದರು, ಎಂಎಲ್‍ಎಗಳು, ಕಾರ್ಯಕರ್ತರು ಪ್ರಚಾರ ನಡೆಸುತ್ತಿ ದ್ದಾರೆ ಎನ್ನಲಾಗಿದೆ.  ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಜಯಲಲಿತ ಅವರ ಸಂಬಂಧಿ ದೀಪ, ಅಗತ್ಯಬಿದ್ದರೆ ರಾಜಕೀಯಕ್ಕೆ ಬರಲು ಸಿದ್ಧ. ಪಕ್ಷದ ಚುಕ್ಕಾಣಿ ಹಿಡಿದು ಅಮ್ಮ ಜಯಲಲಿತ ಅವರ ಮಾರ್ಗದಲ್ಲೇ ನಡೆಯುತ್ತೇನೆ ಎಂದು ಹೇಳುವ ಮೂಲಕ ರಾಜಕೀಯಕ್ಕೆ ಬರುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.  ನಾನು ಈ ಹಿಂದೆ ಅಮ್ಮನ ಜಯ ಲಲಿತ ಅವರ ನಿವಾಸ ಪೋಯೆಸ್ ಗಾರ್ಡನ್‍ನಲ್ಲಿ ತಂಗಿದ್ದೆ. ಆದರೆ ಶಶಿಕಲಾ ಅವರು ನನ್ನನ್ನು ಇಲ್ಲೇ ಉಳಿದುಕೊಳ್ಳಲು ಬಿಡುತ್ತಿರಲಿಲ್ಲ ಎಂದು ಹೇಳಿದರು.
ಈಗ ಪೋಯೆಸ್ ಗಾರ್ಡನ್ ನಲ್ಲಿ ಶಶಿಕಲಾ ಹಾಗೂ ಅವರ ಬೆಂಬಲಿಗರು ವಾಸ ಮಾಡುತ್ತಿದ್ದಾರೆ. ಕಾನೂನಾತ್ಮಕವಾಗಿ ಹೋರಾಡಿ ಪಕ್ಷದ ಚುಕ್ಕಾಣಿಯನ್ನು ವಹಿಸಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ರಾಜಕೀಯ ಎಂಬ ಚೆಸ್ ಆಟದಲ್ಲಿ ಶಶಿಕಲಾ ಅಥವಾ ಜೆ.ದೀಪ ಅವರು ಮೇಲುಗೈ ಸಾಧಿಸುತ್ತಾರೆ ಎಂಬುದನ್ನು ಕಾಡು ನೋಡಬೇಕಿದೆ.  ಈ ಕುರಿತು ಎಐಎಡಿಎಂಕೆ ಪಕ್ಷದ ಪ್ರಮುಖರು ಸ್ಪಷ್ಟೀಕರಣ ನೀಡಿದ್ದು , ಶಶಿಕಲಾ ಅವರೇ ಎಐಎಡಿಎಂಕೆಯ ಹೊಣೆ ಹೊರಲಿದ್ದಾರೆ. ನಾವೆಲ್ಲ ಅವರಿಗೆ ಬೆಂಬಲ ನೀಡುತ್ತೇವೆ ಎಂದು ಎಐಎಡಿಎಂಕೆ ವಕ್ತಾರ ಪೊನ್ನಯಮ್ ಸ್ಪಷ್ಟನೆ ನೀಡಿದ್ದಾರೆ.

Eesanje News App

Sri Raghav

Admin