ಎಚ್‍ಎಂಟಿ ಕಾರ್ಖಾನೆ ಮುಚ್ಚಿರುವ ನಿರ್ಧಾರ ಸರಿಯಲ್ಲ

Spread the love

hmt
ತುಮಕೂರು, ಅ.17-
ಜಿಲ್ಲೆಯ ಹೆಸರುವಾಸಿಯಾಗಿದ್ದ ಎಚ್‍ಎಂಟಿ ಕೈ ಗಡಿಯಾರದ ಕಾರ್ಖಾನೆಯನ್ನು ಮುಚ್ಚಿರುವ ಸರಕಾರದ ನಿರ್ದಾರ ಸರಿಯಿಲ್ಲ. ಸರ್ಕಾರಗಳ ಏಕಾಏಕಿ ನಿರ್ಧಾರದಿಂದ ಕಾರ್ಮಿಕರ ಬದುಕಿಗೆ ತೊಂದರೆಯನ್ನು ಉಂಟು ಮಾಡಲಾಗಿದೆ ಎಂದು ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.  ನಗರದ ಎಸ್‍ಎಸ್‍ಪುರಂನಲ್ಲಿನ ಭೈರವೇಶ್ವರ ಸಹಕಾರ ಬ್ಯಾಂಕ್‍ನ ಸಭಾಂಗಣದಲ್ಲಿ ಶ್ರೀ ಕೆಂಗಲ್ ಸ್ನೇಹ ಸಮಿತಿಯ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಒಕ್ಕಲಿಗ ಸಮುದಾಯದ ಅಭಿವೃದ್ಧಿಗೆ ಸರಕಾರ ಶ್ರಮಿಸಬೇಕಿದೆ ಎಂದು ತಿಳಿಸಿದರು.

ಮಂಡ್ಯ, ಮೈಸೂರು, ರಾಮನಗರ, ತುಮಕೂರು, ಹಾಸನ ಜಿಲ್ಲೆಗಳಲ್ಲಿ ಸ್ವಲ್ಪ ಒಕ್ಕಲಿಗರು ಕೃಷಿಯನ್ನು ಅವಲಂಬಿಸಿ ಬದುಕುತ್ತಿದ್ದಾರೆ. ಆದರೆ ಉಳಿದ ಜಿಲ್ಲೆಗಳಲ್ಲಿರುವ ಒಕ್ಕಲಿಗ ಸಮುದಾಯದವರು ಕೂಲಿ ಮತ್ತು ಇತರೆ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬದುಕು ನಡೆಸುತ್ತಿದ್ದು, ಕುಟುಂಬದ ನಿರ್ವಹಣೆ ಮಾಡಲಾಗದೆ ಕಷ್ಟ ಪಡುವಂತಾಗಿದೆ. ಸಮುದಾಯದಲ್ಲಿ ಬಡತನದಲ್ಲಿರುವವರು ತಮ್ಮ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸಲು ಸಾಧ್ಯವಾಗುತ್ತಿಲ್ಲ ಆದ್ದರಿಂದ ಸರ್ಕಾರ ಒಕ್ಕಲಿಗರ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಮುಂತಾದ ತರಗತಿಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರವನ್ನು ಹಮ್ಮಿಕೊಳ್ಳಲಾಯಿತು. ಹಾಗೂ ಎಚ್‍ಎಂಟಿ ಹಾಗೂ ಇನ್ನಿತರೆ ಇಲಾಖೆಗಳಿಂದ ನಿವೃತ್ತರಾದವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ವೇದಿಕೆಯಲ್ಲಿ ಕೆಂಗಲ್ ಸ್ನೇಹ ಸಮಿತಿಯ ಗೌರವ ಅಧ್ಯಕ್ಷರಾದ ಬಿ.ಸಿ ಕೃಷ್ಣಪ್ಪ, ಅಧ್ಯಕ್ಷ ದಸರೀಘಟ್ಟ ರಂಗಸ್ವಾಮಿ, ಭೈರವೇಶ್ವರ ಸಹಕಾರ ಬ್ಯಾಂಕ್‍ನ ಅಧ್ಯಕ್ಷರಾದ ಎಸ್.ನರಸಿಂಹಯ್ಯ, ರಾಮಲಿಂಗಯ್ಯ, ಕೆ.ಸಿ.ಗೋವಿಂದಯ್ಯ, ಚಿನ್ನಸ್ವಾಮಿ ರೆಡ್ಡಿ, ಡಿ.ಟಿ ಮುನಿಸ್ವಾಮಿಗೌಡ, ರಾಮಲಿಂಗೇಗೌಡ ಮುಂತಾದವರು ಭಾಗವಹಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin