ಎಚ್-1ಬಿ ವೀಸಾ ಕುರಿತು ಅಮೆರಿಕದ ಜೊತೆ ಜೇಟ್ಲಿ ಮಹತ್ವದ ಚರ್ಚೆ
ವಾಷಿಂಗ್ಟನ್, ಏ.21-ಅಮೆರಿಕದಲ್ಲಿರುವ ಉದ್ಯೋಗಸ್ಥ ಭಾರತೀಯರ ನೌಕರಿಗೆ ಆತಂಕ ತಂದೊಡ್ಡಿರುವ ಎಚ್-1ಬಿ ವೀಸಾ ವಿಷಯದ ಬಗ್ಗೆ ಹಣಕಾಸು ಸಚಿವ ಅರುಣ್ ಜೇಟ್ಲಿ, ಆ ದೇಶದ ವಾಣಿಜ್ಯ ಸಚಿವ ವಿಲ್ಬರ್ ರೋಸ್ ಅವರೊಂದಿಗೆ ಸಮಾಲೋಚಿಸಿದ್ದಾರೆ. ಅಮೆರಿಕ ಅಭಿವೃಧ್ದಿಗಾಗಿ ಉನ್ನತ ಕೌಶಲ್ಯದ ಭಾರತೀಯ ವೃತ್ತಿಪರರು ವಹಿಸಿರುವ ಬಹು ಮುಖ್ಯ ಪಾತ್ರವನ್ನು ಜೇಟ್ಲಿ ಪ್ರಮುಖವಾಗಿ ಪ್ರಸ್ತಾಪಿಸಿ, ಉಭಯತ್ರಯರ ಅನುಕೂಲಕ್ಕಾಗಿ ಕೆಲವು ನೀತಿಗಳನ್ನು ಪುನರ್ ಪರಾಮರ್ಶಿಸುವಂತೆ ಮನವಿ ಮಾಡಿದ್ಧಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಫ್ ಆಡಳಿತದಲ್ಲಿ ಇದೇ ಮೊದಲ ಬಾರಿಗೆ ಅಮೆರಿಕ ಮತ್ತು ಭಾರತದ ನಡುವೆ ಪ್ರಪ್ರಥಮ ಸಂಪುಟ-ಮಟ್ಟದ ಸಭೆ ನಡೆಯಿತು. ವಾಷಿಂಗ್ಟನ್ನಲ್ಲಿ ಜೇಟ್ಲಿ ಮತ್ತು ರೋಸ್ ದ್ವಿಪಕ್ಷೀಯ ವಾಣಿಜ್ಯ ಸಹಕಾರ ವೃದ್ಧಿ ಕುರಿತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ವಿತ್ತ ಸಚಿವರು ಎಚ್-1ಬಿ ವೀಸಾ ಕಾರ್ಯಕಾರಿ ಆದೇಶ ಜಾರಿಯಿಂದ ಭಾರತೀಯ ಉದ್ಯೋಗಿಗಳಲ್ಲಿ ಉಂಟಾಗಿರುವ ಆತಂಕವನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು.
ಅಮೆರಿಕದ ಆರ್ಥಿಕ ಮತ್ತು ವಾಣಿಜ್ಯ ಬೆಳವಣಿಗೆಯಲ್ಲಿ ಭಾರತದ ಉನ್ನತ ಕೌಶಲ್ಯದ ಉದ್ಯೋಗಿಗಳು ಮತ್ತು ಸಾಫ್ಟ್ವೇರ್ ಎಂಜಿನಿಯರ್ಗಳ ಪಾತ್ರವನ್ನು ಜೇಲ್ಲಿ ಪಟ್ಟಿ ಮಾಡಿದರು.
ಭಾರತದ ಉದ್ಯೋಗಿಗಳ ಭದ್ರತೆ ಬಗ್ಗೆ ಆಶ್ವಾಸನೆ ನೀಡಿದ ವಾಣಿಜ್ಯ ಸಚಿವರು, ಅಮೆರಿಕ ಈಗಷ್ಟೇ ಎಚ್-1ಬಿ ಪರಾಮರ್ಶೆ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಬಗ್ಗೆ ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿರುವುದಾಗಿ ಉನ್ನತ ಮೂಲಗಳು ಹೇಳಿವೆ.
< Eesanje News 24/7 ನ್ಯೂಸ್ ಆ್ಯಪ್ >