ಎತ್ತಿನಹೊಳೆ ಕಾಮಗಾರಿ ಅರ್ಧದಷ್ಟು ಪೂರ್ಣ

Spread the love

Cm-offic-e

ಬೆಂಗಳೂರು, ಸೆ.1- ಬಯಲುಸೀಮೆ ಪ್ರದೇಶಗಳಿಗೆ ನೀರು ಹರಿಸುವ ಉದ್ದೇಶದಿಂದ ಆರಂಭಿಸಲಾಗಿರುವ ಎತ್ತಿನ ಹೊಳೆ ಯೋಜನೆಗೆ 13 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಡೆಸುತ್ತಿರುವ ಒಟ್ಟು 5 ಪ್ಯಾಕೇಜ್ಗಳ ಕಾಮಗಾರಿಯಲ್ಲಿ ಶೇ.50ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಇಂದಿಲ್ಲಿ ತಿಳಿಸಿದರು. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಎತ್ತಿನಹೊಳೆ ಮತ್ತು ಕೆಸಿ ವ್ಯಾಲಿ ಯೋಜನೆ ಕುರಿತಂತೆ ನಡೆದ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 5 ಪ್ಯಾಕೇಜ್ಗಳ ಕಾಮಗಾರಿಯಲ್ಲಿ 3 ಪ್ಯಾಕೇಜ್ಗಳ ಕಾಮಗಾರಿ ಪೂರ್ಣಗೊಂಡಿದೆ. ಉಳಿದ ಕಾಮಗಾರಿಗಳಿಗೆ ಅಗತ್ಯವಿರುವ ಭೂ ಸ್ವಾಧೀನ, ಅರಣ್ಯ ಇಲಾಖೆ ಅನುಮತಿ, ಇನ್ನಿತರ ಕೆಲಸಗಳು ಬಾಕಿಯಿದ್ದು, ಅದನ್ನು ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ ಎಂದರು.

ಪ್ರಮುಖವಾಗಿ ಸಣ್ಣ ನೀರಾವರಿ ಇಲಾಖೆ, ಕಂದಾಯ, ಅರಣ್ಯ ಇಲಾಖೆಗಳ ಸಮನ್ವಯದೊಂದಿಗೆ ಸೂಕ್ತ ಕ್ರಮಗಳನ್ನು ಕೈಗೊಂಡು ಕೋಲಾರ ಮತ್ತು ಚಿಕ್ಕಬಳ್ಳಾಪುರ ಕೆರೆಗಳಿಗೆ ನೀರು ಹರಿಸುವ ಯೋಜನೆಯಾದ ಕೆಸಿ ವ್ಯಾಲಿ ಮತ್ತು ಬಯಲುಸೀಮೆಗೆ ನೀರು ಹರಿಸುವ ಎತ್ತಿನ ಹೊಳೆ ಯೋಜನೆಯನ್ನು ಪೂರ್ಣಗೊಳಿಸುವಂತೆ ಆದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಐದು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಸಭೆಯನ್ನು ನಡೆಸಿ ಈ ಯೋಜನೆಗಳ ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಲಿದ್ದಾರೆ.   ಎತ್ತಿನಹೊಳೆ ಸಂಬಂಧ ಹಸಿರುಪೀಠದಲ್ಲಿ ದಾಖಲಾಗಿದ್ದ ಆರು ಪ್ರಕರಣಗಳಲ್ಲಿ ಒಂದು ಪ್ರಕರಣ ವಜಾ ಆಗಿದ್ದು, ಐದು ಪ್ರಕರಣ ಸುಪ್ರೀಂಕೋರ್ಟ್ನ ಹಸಿರು ಪೀಠಕ್ಕೆ ರವಾನೆಯಾಗಿದೆ ಎಂದರು.

ಸದ್ಯದಲ್ಲೇ ಈ ಯೋಜನೆಯನ್ನು ಸಚಿವರಾದ ಕಾಗೋಡು ತಿಮ್ಮಪ್ಪ, ಟಿ.ಬಿ.ಜಯಚಂದ್ರ ಮತ್ತಿತರರೊಂದಿಗೆ ಚರ್ಚಿಸಿ ಸಮನ್ವಯತೆಯೊಂದಿಗೆ ಯೊಜನೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗುವುದು ಎಂದು ಮಾಹಿತಿ ನೀಡಿದರು.  ರಮೇಶ್ಕುಮಾರ್ ಆಕ್ರೋಶ: ನೀರಾವರಿ ಯೋಜನೆಗಳ ಅನುಷ್ಠಾನ ಕೇವಲ ಪೇಪರ್ಗಳಲ್ಲಿ ಮಾತ್ರ ಆಗುತ್ತಿವೆ. ಭೌತಿಕವಾಗಿ ಏನೇನೂ ನಡೆಯುತ್ತಿಲ್ಲ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ಕುಮಾರ್ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ನಡೆದ ಎತ್ತಿನಹೊಳೆ ಹಾಗೂ ಕೆಸಿ ವ್ಯಾಲಿ ಕುರಿತ ಸಭೆಗೆ ಅರಣ್ಯ ಇಲಾಖೆಯ ಹೆಚ್ಚುವರಿ ಉಪಸಂರಕ್ಷಣಾಧಿಕಾರಿಯೊಬ್ಬರು ಗೈರು ಹಾಜರಾಗಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಸರ್ಕಾರದ ಯೋಜನೆಗಳು ಅನುಷ್ಠಾನವಾಗಬೇಕಾದರೆ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿರುತ್ತದೆ. ಆದರೆ, ಕಾನೂನಿನ ಹೆಸರಿನಲ್ಲಿ ಅಧಿಕಾರಿಗಳೇ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

ಸಿಕೆ ವ್ಯಾಲಿ ವ್ಯಾಪ್ತಿಯ ಬೈಲಗೊಂಡ್ಲು ಪ್ರದೇಶದಲ್ಲಿ ಭೂ ಸ್ವಾಧೀನಕ್ಕೆ ಸ್ಥಳೀಯರು ಪರಿಹಾರ ಮೊತ್ತ ಹೆಚ್ಚು ನೀಡುವಂತೆ ಒತ್ತಾಯಿಸುತ್ತಿರುವುದರಿಂದ ಗೊಂದಲದ ಪರಿಸ್ಥಿತಿ ಉಂಟಾಗಿದೆ. ಈ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಗಮನ ಸೆಳೆಯಲಾಯಿತು.

► Follow us on –  Facebook / Twitter  / Google+

Facebook Comments

Sri Raghav

Admin