ಎಬಿವಿಪಿ ಮೇಲೆ ಲಾಠಿಚಾರ್ಜ್ : ಬಿಜೆಪಿ ಪ್ರತಿಭಟನೆ
ಬೇಲೂರು, ಆ.25- ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳ ಮೇಲೆ ಅಮಾನುಷವಾಗಿ ವರ್ತಿಸಿದ ಪೊಲೀಸರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ತಾಲೂಕು ಬಿಜೆಪಿ ಘಟಕ ಪ್ರತಿಭಟಿಸಿತು.ತಾಲೂಕು ಪ್ರಧಾನ ಕಾರ್ಯದರ್ಶಿ ನವಿಲಹಳ್ಳಿ ಕಿಟ್ಟಿ ಮಾತನಾಡಿ, ಭಾರತ ಹಾಗೂ ಭಾರತೀಯ ಸೇನೆಯ ವಿರುದ್ದ ಘೋಷಣೆ ಕೂಗಿ ಆಮ್ನೇಸ್ಟಿ ಇಂಟರ್ನ್ಯಾಷನಲ್ ಸಂಸ್ಥೆ ದೇಶ ವಿರೋಧಿ ಕೆಲಸ ಮಾಡಿದೆ. ಇದನ್ನು ಖಂಡಿಸಿ ಎಬಿವಿಪಿ ವಿದ್ಯಾರ್ಥಿಗಳು ಪ್ರತಿಭಟಿಸುವ ವೇಳೆ ಪೊಲೀಸರು ಅಮಾನುಷವಾಗಿ ವರ್ತಿಸಿದ್ದು, ಕೂಡಲೇ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಅಲ್ಲದೆ ದೇಶ ವಿರೋಧಿ ಹೇಳಿಕೆಗಳನ್ನು ಕೂಗಿದ ಆರೋಪಿಗಳನ್ನು ಇಲ್ಲಿವರೆಗೂ ಬಂಧಿಸದೆ ಇರುವುದು ಒಂದು ಕಡೆಯಾದರೆ ಆಮ್ನೇಸ್ಟಿ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತಿದ್ದ ವಿದ್ಯಾರ್ಥಿಗಳ ಮೇಲೆ ಅದರಲ್ಲೂ ವಿದ್ಯಾರ್ಥಿನಿಯರನ್ನೂ ಗುರಿಯಾಗಿಸಿ ಕೊಂಡು ಪೊಲೀಸರು ಲಾಠಿಚಾರ್ಜ್ ನಡೆಸಿರುವುದು ಅಮಾನುಷ ಕೃತ್ಯವಾಗಿದೆಯಲ್ಲದೆ ಜನಪರ ಹೊರಾಟಗಳನ್ನು ಹತ್ತಿಕ್ಕುವ ಕೆಲಸ ಮಾಡಲಾಗಿದೆ. ಆದ್ದರಿಂದ ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಪರ್ವತಯ್ಯ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶಿವಕುಮಾರ್, ಶೇಖರಯ್ಯ, ತಾಲ್ಲೂಕು ಉಪಾಧ್ಯಕ್ಷ ಸಚಿನ್, ಅಲ್ಪ ಸಂಖ್ಯಾತ ಘಟಕದ ಸುಲೇಮಾನ್, ಅಸ್ಲಂ ಮತ್ತಿತರರಿದ್ದರು.