ಎರಡೂ ಕ್ಷೇತ್ರಗಳಲ್ಲಿ ನಮ್ಮದೇ ಗೆಲುವು : ಪರಮೇಶ್ವರ್ ವಿಶ್ವಾಸ

parameshwar

ಬೆಂಗಳೂರು, ಮಾ.14- ಗುಂಡ್ಲುಪೇಟೆ- ನಂಜನಗೂಡು ಉಪಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪ್ರತಿಪಕ್ಷಗಳು ಸರ್ಕಾರದ ಮೇಲೆ ಮಾಡುತ್ತಿರುವ ಸಾಕಷ್ಟು ಆರೋಪಗಳಿಗೆ ಈ ಚುನಾವಣೆಯಲ್ಲಿ ಜಯಗಳಿಸುವುದರ ಮೂಲಕ ಉತ್ತರ ನೀಡುತ್ತೇವೆ ಎಂದು ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಹೇಳಿದರು.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಪಕ್ಷಗಳಿಗೆ ಪಾಠ ಕಲಿಸಲು ನಾವು ಚುನಾವಣೆ ಗೆಲ್ಲಲೇಬೇಕಾಗಿದೆ. ಈ ಎರಡೂ ಕ್ಷೇತ್ರಗಳಲ್ಲಿ ಮತದಾರರು ನಮ್ಮ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸ ನಮಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿ ಹಗಲುಗನಸು ಕಾಣುತ್ತಿದ್ದಾರೆ. ಅವರ ಕನಸು ನನಸಾಗುವುದಿಲ್ಲ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಮುಖ್ಯಮಂತ್ರಿಯಾದಿಯಾಗಿ ಸಚಿವರು ಜೈಲಿಗೆ ಹೋಗಿಬಂದಿದ್ದಾರೆ. ಅವರ ಆಡಳಿತದಲ್ಲಿ ನಡೆದ ಅವಾಂತರಗಳನ್ನು ರಾಜ್ಯದ ಜನ ಇನ್ನೂ ಮರೆತಿಲ್ಲ. ನಮ್ಮ ಸರ್ಕಾರ ನಾಲ್ಕು ವರ್ಷಗಳಲ್ಲಿ ನೀಡಿದ ಜನಪರ ಕಾರ್ಯಕ್ರಮಗಳನ್ನು ಜನ ಪ್ರಶಂಸಿಸಿದ್ದಾರೆ. ಎರಡೂ ಸರ್ಕಾರಗಳ ಆಡಳಿತದ ಬಗ್ಗೆ ಮಾಧ್ಯಮಗಳ ಸಮೀಕ್ಷೆ ನಡೆಸಿದರೆ ಮುಂದಿನ ಚುನಾವಣೆಯಲ್ಲಿ ರಾಜ್ಯದ ಮತದಾರ ಯಾರ ಪರವಾಗಿದ್ದಾನೆ ಎಂಬುದು ತಿಳಿಯಲಿದೆ.
ಪಂಚರಾಜ್ಯಗಳ ಚುನಾವಣೆ ಫಲಿತಾಂಶದಿಂದ ನಮಗೇನೂ ಭಯ ಉಂಟಾಗಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಮತದಾರ ಯಾವ ರೀತಿ ತೀರ್ಪು ನೀಡಿದ್ದಾನೆ ಎಂಬುದು ತಿಳಿಯುತ್ತದೆ. ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರೇ ಇಲ್ಲಿ ಬಂದು ಠಿಕಾಣಿ ಹೂಡಲು ಮುಂದಾಗಿದ್ದಾರೆ ಎಂದರೆ ನಮಗೆ ಅವರು ಎಷ್ಟು ಭಯ ಪಟ್ಟಿದ್ದಾರೆ ಎಂಬುದನ್ನು ನೀವೇ ಊಹಿಸಿ ಎಂದು ಹೇಳಿದರು.

ಇನ್ನೆರಡು ದಿನಗಳಲ್ಲಿ ಎರಡೂ ಕ್ಷೇತ್ರಗಳಿಗೆ ಅಭ್ಯರ್ಥಿಗಳ ನೇಮಕ, ಪ್ರತಿ ಜಿಲ್ಲಾ ಪಂಚಾಯಿತಿಗಳಿಗೆ ಒಬ್ಬೊಬ್ಬ ಸಚಿವರ ನೇಮಕ, ಪಂಚಾಯಿತಿಗೊಬ್ಬ ಪಕ್ಷದ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ವಿಧಾನ ಪರಿಷತ್ ಸದಸ್ಯರ ಸೇವೆಯನ್ನೂ ಕೂಡ ಚುನಾವಣೆಗೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಪಕ್ಷದಲ್ಲಿ ಬೂತ್ ಮಟ್ಟದಲ್ಲಿ 50 ಜನ ಆ್ಯಕ್ಟೀವ್ ಮೆಂಬರ್‍ಗಳನ್ನು ನೇಮಿಸಿ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸಲಾಗುವುದು ಎಂದು ಪರಮೇಶ್ವರ್ ಹೇಳಿದರು.

ಜನಾರ್ದನ ಪೂಜಾರಿಯವರ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯವಾಗಿದ್ದು, ನಾವು ಅದನ್ನು ಅಲ್ಲಿಗೇ ಬಿಡುತ್ತೇವೆ. ಆರು ತಿಂಗಳಲ್ಲಿ ಪೂಜಾರಿಯವರು ಸಾಕಷ್ಟು ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಬಗ್ಗೆ ಹೈಕಮಾಂಡ್ ಗಮನಕ್ಕೆ ತಂದಿದ್ದೇವೆ. ಎಸ್.ಎಂ.ಕೃಷ್ಣ ಅವರು ಪಕ್ಷ ತೊರೆದಿರುವುದು ಕಾಂಗ್ರೆಸ್‍ಗೆ ದೊಡ್ಡ ನಷ್ಟವೇನಿಲ್ಲ. ಕಾಂಗ್ರೆಸ್ ಪಕ್ಷ ಯಾವತ್ತೂ ಜಾತಿ ರಾಜಕಾರಣ ಮಾಡಲ್ಲ. ಕೃಷ್ಣ ಅವರು ಬಿಜೆಪಿ ಸೇರುತ್ತಾರೆ ಎಂದು ಹೇಳುತ್ತಿದ್ದಾರೆ. ಅವರು ಆ ಪಕ್ಷ ಸೇರುವ ಬಗ್ಗೆ ಗೊತ್ತಿಲ್ಲ. ಉಪಚುನಾವಣೆಯಲ್ಲಿ ಅವರು ಬಿಜೆಪಿ ಪರ ಪ್ರಚಾರ ಮಾಡಿದರೆ ತೊಂದರೆ ಇಲ್ಲ. ಅದನ್ನು ನಾವು ನಿರ್ವಹಿಸುತ್ತೇವೆ. ಎರಡೂ ಕ್ಷೇತ್ರಗಳ ಚುನಾವಣೆ ದಿಕ್ಸೂಚಿಯಾಗುವುದಿಲ್ಲ ಎಂದು ಹೇಳಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin