ಎಲೆಕ್ಷನ್ ಹತ್ತಿರವಾಗುತ್ತಿದ್ದಂತೆ ಕೆ.ಆರ್.ಪುರದಲ್ಲಿ ಮತದಾರರ ಪಟ್ಟಿ ಸೇರಿಕೊಳ್ಳುತ್ತಿದ್ದರೆ ನಕಲಿ ಮತದಾರರು

NRRamesh--01

ಬೆಂಗಳೂರು, ಮೇ 24- ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬೆಂಗಳೂರು ನಗರದ ವಿವಿಧ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನಕಲಿ ಮತದಾರರ ಹೆಸರುಗಳನ್ನು ಪಟ್ಟಿಯಲ್ಲಿ ಸೇರ್ಪಡೆಗೊಳಿಸುವ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಆರೋಪ ಮಾಡಿದ್ದಾರೆ.  ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ಮತದಾರರ ಸೇರ್ಪಡೆ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಅವರಿಗೆ ಪಾಲಿಕೆ ಸದಸ್ಯ ಬಂಡೇ ರಾಜು ಮತ್ತಿತರರೊಂದಿಗೆ ದೂರು ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ 9 ವಾರ್ಡ್‍ಗಳ ವ್ಯಾಪ್ತಿಯಲ್ಲಿ 1.4.2016ರಿಂದ 31.3.2017ರವರೆಗೆ ಸುಮಾರು 19,000ಕ್ಕೂ ಹೆಚ್ಚು ಹೊಸ ನಕಲಿ ಮತದಾರರ ಹೆಸರು ಸೇರ್ಪಡೆಯಾಗಿರುವುದು ದಾಖಲೆಗಳಿಂದ ಸ್ಪಷ್ಟವಾಗಿದೆ ಎಂದು ದೂರಿದರು.ಈ ಪೈಕಿ ಶೇ.70ಕ್ಕೂ ಹೆಚ್ಚು ಮತದಾರರು ಕ್ಷೇತ್ರಕ್ಕೆ ಸಂಬಂಧ ಇಲ್ಲದ ವ್ಯಕ್ತಿಗಳಾಗಿದ್ದಾರೆ. ಇವರು ತಮಿಳುನಾಡು, ಆಂಧ್ರಪ್ರದೇಶ ಗಡಿಪ್ರದೇಶದ ನಾಗರಿಕರಾಗಿದ್ದಾರೆ.  ಇವರೆಲ್ಲರ ಹೆಸರಿಗೆ ನಕಲಿ ಬಾಡಿಗೆ ಗುತ್ತಿಗೆ ಕರಾರು ಪತ್ರಗಳನ್ನು ಸೃಷ್ಟಿಸುವ ಮೂಲಕ ಮತದಾರರ ಪಟ್ಟಿಗೆ ಕಾನೂನು ಬಾಹಿರವಾಗಿ ಹೆಸರುಗಳನ್ನು ಸೇರಿಸಲಾಗಿದೆ.  ಆತಂಕಕಾರಿ ವಿಷಯವೆಂದರೆ ಈ ಭಾಗದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಸಾವಿರಾರು ಮಂದಿ ಅಕ್ರಮ ಬಾಂಗ್ಲಾ ನುಸುಳುಕೋರರನ್ನು ಸಹ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.

ದೇಶದ ಆಂತರಿಕ ಭದ್ರತಗೆ ಸವಾಲಾಗಿರುವ ಈ ಅಕ್ರಮ ಬಾಂಗ್ಲಾ ನುಸುಳುಕೋರರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿರುವುದರಲ್ಲಿ ಶಾಸಕ ಬೈರತಿ ಬಸವರಾಜ ಅವರ ಪಾತ್ರವಿದೆ ಎಂದು ರಮೇಶ್ ದೂರಿದರು.  ನಕಲಿ ಮತದಾರರ ಪಟ್ಟಿಯನ್ನು ಕೂಲಂಕಷವಾಗಿ ಪರಿಶೀಲಿಸಿ 1.4.2016ರಿಂದ 31.3.2017ರವರೆಗಿನ ಅವಧಿಯಲ್ಲಿ ಕೆ.ಆರ್‍ಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸೇರ್ಪಡೆಗೊಂಡಿರುವ ನಕಲಿ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕುವಂತೆ ಸಂಬಂಧಪಟ್ಟ  ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ರಮೇಶ್ ಮುಖ್ಯ ಚುನಾವಣಾಧಿಕಾರಿಗಳಲ್ಲಿ ಮನವಿ ಮಾಡಿರುವುದಾಗಿ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin