ಎಸಿಬಿ ಬಲೆಗೆ ಬಿದ್ದ 2 ತಿಮಿಂಗಿಲಗಳು : ಬರೋಬ್ಬರಿ 500 ಕೋಟಿ ರೂ. ಚಿನ್ನಾಭರಣ ವಶ..!
ವಿಜಯವಾಡ, ಸೆ.26-ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ವಿವಿಧೆಡೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಎರಡು ಭಾರೀ ತಿಮಿಂಗಿಲಗಳನ್ನು ಬಲೆಗೆ ಕೆಡವಿಕೊಂಡು 500 ಕೋಟಿ ರೂ.ಗಳಿಗೂ ಅಧಿಕ ಮೌಲ್ಯದ ವಜ್ರ ಖಚಿತ ಚಿನ್ನಾಭರಣಗಳು ಮತ್ತು ಆಸ್ತಿ-ಪಾಸ್ತಿಗಳನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರ ಪ್ರದೇಶದ ಪಟ್ಟಣ ಮತ್ತು ಗ್ರಾಮ ಯೋಜನೆ ನಿರ್ದೇಶಕ (ಡಿಟಿಪಿಸಿ) ಗೊಲ್ಲ ವೆಂಕಟ ರಘು ಹಾಗೂ ವಿಜಯವಾಡ ನಗರ ಸಭೆಯ ಎಂಜಿನಿಯರಿಂಗ್ ವಿಭಾಗದ ಕಿರಿಯ ತಾಂತ್ರಿಕ ಅಧಿಕಾರಿ ನಲ್ಹರಿ ವೆಂಕಟ ಶಿವ ಪ್ರಸಾದ್ ಎಸಿಬಿ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು.
ಗೊಲ್ಲ ವೆಂಕಟ ರಘು ದೇವಾಲಯ ನಗರಿ ಶಿರಡಿಯಲ್ಲೂ ಒಂದು ಬೃಹತ್ ಲಾಡ್ಜ್ ಹೊಂದಿದ್ದಾರೆ. ಹೈದರಾಬಾದ್ ಸೇರಿದಂತೆ ವಿವಿಧ ನಗರಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರ ಭಾರೀ ಭ್ರಷ್ಟಾಚಾರ ಮತ್ತು ಲಂಚಾವತಾರಗಳಲ್ಲಿ ಶಾಮೀಲಾಗಿರುವ ವ್ಯಾಪಕ ದೂರುಗಳೂ ಕೇಳಿ ಬಂದಿತ್ತು. ಮತ್ತೊಬ್ಬ ಭ್ರಷ್ಟ ಅಧಿಕಾರಿ ವೆಂಕಟ ಶಿವ ಪ್ರಸಾದ್ ಮೇಲೂ ಸಾಕಷ್ಟು ಭ್ರಷ್ಟಾಚಾರದ ಆರೋಪಗಳು ಇದ್ದವು. ಈ ಹಿನ್ನೆಲೆಯಲ್ಲಿ ಎಸಿಬಿ ಮಹಾ ನಿರ್ದೇಶಕ ಆರ್.ಪಿ.ಠಾಕೂರ್ ಆದೇಶದ ಮೇಲೆ ನಿನ್ನೆ ಈ ಇಬ್ಬರು ಅಧಿಕಾರಿಗಳ ಕಚೇರಿಗಳು, ನಿವಾಸಗಳು, ಸಂಬಂಧಿಕರ ಮನೆಗಳೂ ಸೇರಿದಂತೆ ಏಕಕಾಲದಲ್ಲಿ 23 ಸ್ಥಳಗಳ ಮೇಲೆ ದಾಳಿಗಳನ್ನು ನಡೆಸಲಾಯಿತು.
ದಾಳಿಗಳ ಸಂದರ್ಭದಲ್ಲಿ ಅಧಿಕಾರಿಗಳೇ ಬೆರಗಾಗುವಂಥ ಚಿನ್ನಾಭರಣಗಳು ಮತ್ತು ವಜ್ರವೈಢೂರ್ಯಗಳ ದೊಡ್ಡ ಭಂಡಾರವೇ ಪತ್ತೆಯಾಯಿತು. ಇವುಗಳು 11 ಕೆಜಿ ತೂಕ ಹೊಂದಿದ್ದು, ಹಲವು ಕೋಟಿ ರೂ.ಗಳಿಗೂ ಅಧಿಕ ಮೌಲ್ಯ ಹೊಂದಿದೆ ಎಂದು ಎಸಿಬಿ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ದಾಳಿ ವೇಳೆ ಭಾರೀ ಪ್ರಮಾಣದ ಬೇನಾಮಿ ಆಸ್ತಿ-ಪಾಸ್ತಿಗಳಿಗೆ ಸಂಬಂಧಿಸಿದ ದಾಖಲೆಪತ್ರಗಳು ಮತ್ತು ದಸ್ತಾವೇಜುಗಳೂ ಬಹಿರಂಗಗೊಂಡಿದ್ದು, ಲಂಚಾವತಾರದ ವಿರಾಟ್ ಸ್ವರೂಪವನ್ನು ಅನಾವರಣಗೊಳಿಸಿದೆ.
ಎಸಿಬಿಗೆ ಲಭಿಸಿರುವ ಮತ್ತೊಂದು ಮಹತ್ವದ ಮಾಹಿತಿ ಎಂದರೆ ಶಿವ ಪ್ರಸಾದ್ ಅವರ ಪತ್ನಿ ಚಿಂತಮನೇನಿ ಗಾಯತ್ರಿ (ಸಹಾಯಕ ಎಂಜಿನಿಯರ್) ಅವರೂ ಕೂಡ ದೊಡ್ಡ ಮಟ್ಟದ ಭ್ರಷ್ಟಾಚಾರಕ್ಕೆ ಸಾಥ್ ನೀಡಿದ್ಧಾರೆ. 2003ರಲ್ಲಿ ವಿಜಯವಾಡ ನಗರ ಸಭೆಯಲ್ಲಿ ವೆಂಕಟ ರಘು, ಶಿವಪ್ರಸಾದ್ ಹಾಗೂ ಅವರ ಪತ್ನಿ ಗಾಯತ್ರಿ ಮೂವರೂ ಕಾರ್ಯನಿರ್ವಹಿಸುತ್ತಿದ್ದರು. ಆಗಿನಿಂದ ಆಪ್ತ ಕುಟುಂಬ ಮಿತ್ರರಾಗಿದ್ದ ಇವರು 15 ವರ್ಷಗಳಿಂದಲೂ ಲಂಚ-ರುಷುವತ್ತುಗಳನ್ನು ಪಡೆಯುತ್ತಾ ನಿರೀಕ್ಷೆ ಮೀರಿ ಆಸ್ತಿ ಗಳಿಸಿದ್ದಾರೆ. ಗಾಯತ್ರಿ ಅವರ ಬಗ್ಗೆಯೂ ಎಸಿಬಿ ಮಾಹಿತಿಗಳನ್ನು ಕ್ರೋಢೀಕರಿಸುತ್ತಿದ್ದು, ಯಾವುದೇ ಕ್ಷಣದಲ್ಲಿ ವಶಕ್ಕೆ ತೆಗೆದುಕೊಳ್ಳುವ ಸಾಧ್ಯತೆ ಇದೆ.