ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್

Laptop-Free

ಬೆಂಗಳೂರು, ಜ.12- ಎಸ್ಸಿ-ಎಸ್ಟಿ ಸಮು ದಾಯದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‍ಟಾಪ್ ಕೊಡಲು ನಿರ್ಧರಿಸಲಾಗಿದ್ದು, ಸಾಮಾನ್ಯವರ್ಗದ ಬಡ ವಿದ್ಯಾರ್ಥಿಗಳಿಗೂ ಮುಂದಿನ ವರ್ಷದಿಂದ ಉಚಿತ ಲ್ಯಾಪ್‍ಟಾಪ್ ನೀಡಲು ಪರಿಶೀಲನೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜರಾಯರೆಡ್ಡಿ ಭರವಸೆ ನೀಡಿದರು. ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಉನ್ನತ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಕಾಲಾಜುಗಳಲ್ಲಿ ಗ್ರಂಥಾಲಯಗಳಿವೆ. ಆಧುನಿಕ ಯುಗದಲ್ಲಿ ಅಂತರ್ಜಾಲ ಬಳಕೆ ಹಾಗೂ ಕಂಪ್ಯೂಟರ್ ಬಳಕೆ ಹೆಚ್ಚು ಮಹತ್ವ ಪಡೆದುಕೊಂಡಿದೆ. ಹಾಗಾಗಿ ಈ ವರ್ಷದಿಂದಲೇ ಮೊದಲ ವರ್ಷದ ಪದವಿಪೂರ್ವ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡಲಾಗುವುದು ಎಂದರು.

ಜಾತಿಭೇದವಿಲ್ಲದೆ 3 ಲಕ್ಷಕ್ಕಿಂತ ಕಡಿಮೆ ಆದಾಯವಿರುವ ಕುಟುಂಬದ ವಿದ್ಯಾರ್ಥಿಗಳಿಗೂ ಲ್ಯಾಪ್‍ಟಾಪ್ ನೀಡುವ ಚಿಂತನೆ ಇದೆ. ಇದನ್ನು ಮುಂದಿನ ವರ್ಷದಿಂದ ಜಾರಿಗೆ ತರಲಾಗುವುದು ಎಂದು ತಿಳಿಸಿದರು. ರಾಜ್ಯದಲ್ಲಿರುವ 412 ಸರ್ಕಾರಿ ಪದವಿ ಕಾಲೇಜುಗಳ ಪೈಕಿ 90 ಕಾಲೇಜುಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಒದಗಿಸಲಾಗಿದೆ. ಮುಂದಿನ ವರ್ಷದಿಂದ ಎಲ್ಲ ಕಾಲೇಜುಗಳಿಗೂ ಉಚಿತ ವೈ-ಫೈ ಸೌಲಭ್ಯ ನೀಡಲಾಗುವುದು ಎಂದರು. ಉನ್ನತ ಶಿಕ್ಷಣ ಗುಣಮಟ್ಟ ಸುಧಾರಣೆಗೆ ನಮ್ಮ ಸರ್ಕಾರ ಹೆಚ್ಚು ಆದ್ಯತೆ ನೀಡುತ್ತಿದೆ. ಎಲ್ಲ ವಿಶ್ವವಿದ್ಯಾಲಯಗಳಿಗೂ ಅನ್ವಯವಾಗುವಂತೆ ಏಕರೂಪ ಕಾಯ್ದೆಯನ್ನು ಜಾರಿಗೆ ತರುವಸಿದ್ಧತೆ ನಡೆದಿದ್ದು, ಈ ವರ್ಷದ ಬಜೆಟ್ ಅಧಿವೇಶನದಲ್ಲಿ ಹೊಸ ಕಾಯ್ದೆ ಮಂಡನೆಯಾಗಲಿದೆ. ಈ ಮೂಲಕ ಅಧ್ಯಾಪಕರಿಗೆ, ವಿದ್ಯಾರ್ಥಿಗಳಿಗೆ ಹೆಚ್ಚಿನ ಬಲ ತುಂಬುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

ವ್ಯಾಸಂಗದ ಜತೆಗೆ ಕೌಶಲ್ಯಾಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಪ್ರತ್ಯೇಕ ಕೌಶಲ್ಯ ವಿವಿ ಮಾಡುವ ಚಿಂತನೆ ಇದೆ ಎಂದು ತಿಳಿಸಿದರು. ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಪ್ರಮಾಣ ಶೇ.94ರಷ್ಟಿದ್ದರೆ ಪದವಿ ಪೂರ್ವ ಹಂತಕ್ಕೆ ಶೇ.57ಕ್ಕೆ ಇಳಿಯುತ್ತದೆ. ಪದವಿ ಹಂತಕ್ಕೆ ಶೇ.27ಕ್ಕೆ ಬರುತ್ತದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಶೇ.10ರಷ್ಟು ವಿದ್ಯಾರ್ಥಿಗಳು ಪದವಿ ಹಂತ ತಲುಪುವುದಿಲ್ಲ. ಹಳೆ ಮೈಸೂರು ಭಾಗದಲ್ಲಿ ಇದು ಶೇ.50ರಷ್ಟಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಉನ್ನತ ಶಿಕ್ಷಣಕ್ಕೆ ಒತ್ತು ನೀಡಲು ಮುಖ್ಯಮಂತ್ರಿಗಳು ಗಮನ ಹರಿಸಿದ್ದಾರೆ ಎಂದರು. ಸ್ಪರ್ಧಾತ್ಮಕ ಜಗತ್ತಿಗೆ ವಿದ್ಯಾರ್ಥಿಗಳನ್ನು ತಯಾರು ಮಾಡಲು ನಮ್ಮ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ. ದಕ್ಷಿಣ ಭಾರತದಲ್ಲಿ ಪ್ರಥಮವಾಗಿ ಮಹಾರಾಣಿ ಕಾಲೇಜನ್ನು ಕ್ಲಸ್ಟರ್ ವಿವಿಯಾಗಿ ಘೋಷಿಸಲಾಗಿದೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Sri Raghav

Admin