ಎಸ್ಸೆಸ್ಸೆಲ್ಸಿ-ಪಿಯುಸಿ ಆಯ್ತು ಮುಂದೇನು..?

SSLC--01

ವಿದ್ಯಾರ್ಥಿಗಳಿಗೆ ಟರ್ನಿಂಗ್ ಪಾಯಿಂಟ್ ಎಂದೇ ಹೇಳಲಾಗುವ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳ ನಂತರ ಮುಂದೇನು ಎಂಬ ಪ್ರಶ್ನೆ ಕಾಡದೇ ಇರದು. ಸಾಮಾನ್ಯವಾಗಿ ಎಸ್ಸೆಸ್ಸೆಲ್ಸಿ ನಂತರ ತಮ್ಮ ಇಷ್ಟದ ಕೋರ್ಸ್ ಅಥವಾ ಕ್ಷೇತ್ರದಲ್ಲಿ ನೈಪುಣ್ಯತೆ ಸಾಧಿಸಲು ಹಾಗೂ ಪಿಯುಸಿಯಲ್ಲಿ ವಿಷಯದ ಆಯ್ಕೆಯಲ್ಲೂ ಗೊಂದಲ ಮಾಡಿಕೊಳ್ಳುತ್ತಾರೆ.  ಅದರಲ್ಲೂ ಪಾಠ ಪ್ರವಚನಗಳಲ್ಲಿ ಅಷ್ಟೇನೂ ಆಸಕ್ತಿ ಇಲ್ಲದ ವಿದ್ಯಾರ್ಥಿಗಳು ಉತ್ತೀರ್ಣರಾದರೆ ಸಾಕು ಎಂಬ ತವಕದಲ್ಲಿರುತ್ತಾರೆ. ಹಾಗೋ ಹೀಗೂ ಪಿಯುಸಿಯಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವಿಷಯವನ್ನು ತೆಗೆದುಕೊಂಡು ತೇರ್ಗಡೆಯಾದರೆ ಮತ್ತೆ ಮುಂದೇನು ಎಂಬ ಪ್ರಶ್ನೆ ಪ್ರತ್ಯಕ್ಷವಾಗುತ್ತದೆ.ಒಟ್ಟಾರೆ ಭವಿಷ್ಯಕ್ಕೆ ಅಗತ್ಯವಿರುವ ಕೌಶಲ್ಯಾಧಾರಿತ ಶಿಕ್ಷಣದಿಂದ ಬಹುಬೇಗ ಜೀವನದಲ್ಲಿ ಒಂದು ಹಂತ ತಲುಪಬಹುದು ಎಂದೇ ಬಯಸುವವರು ಬಹಳಷ್ಟು ಮಂದಿ. ಹಾಗಾಗಿಯೇ ಪಿಯುಸಿ, ಡಿಗ್ರಿ, ಮಾಸ್ಟರ್‍ಡಿಗ್ರಿ ಪೂರೈಸಿ ನಂತರ ಕೆಲಸವೆಂದು ಅಲೆದಾಡುವುದರಿಂದ ಆಗುವ ತೊಂದರೆ ಅರಿತ ಅದೆಷ್ಟೋ ಮಂದಿ ನೇರವಾಗಿ ಯಾವುದಾದರು ಕ್ಷೇತ್ರದಲ್ಲಿ ತೊಡಗಿಕೊಳ್ಳಲು ಇಚ್ಛಿಸುತ್ತಾರೆ.   ಅದರಲ್ಲೂ ಈಗಿನ ಕಾಲದಲ್ಲಂತೂ ಬಿಎ, ಬಿಎಸ್ಸಿ, ಡಿಗ್ರಿ ಪೂರೈಸಿದರೂ ಹೆಚ್ಚಿನ ವಿದ್ಯಾಭ್ಯಾಸದ ಕೊರತೆಯೋ ಅಥವಾ ಕೆಲಸದ ಅನುಭವದ ಕೊರತೆಯಿಂದಲೊ ಕೆಲಸ ಸಿಗುವುದೇ ಕಡಿಮೆ ಎನ್ನುವಂತಹ ವಾತಾವರಣ ಸಾಕಷ್ಟಿದೆ. ಇಷ್ಟೆಲ್ಲಾ ಪೀಠಿಕೆ ಏಕೆಂದು ಯೋಚಿಸುತ್ತಿರುವವರಾದರೆ ಇಲ್ಲಿದೆ ಉತ್ತರ. ನಿರಂತರವಾಗಿ ಎಸ್ಸೆಸ್ಸೆಲ್ಸಿ ನಂತರವೂ ನಾಲ್ಕೈದು ವರ್ಷ ಓದನ್ನು ಮುಂದುವರೆಸಿ ನಂತರ ಕೆಲಸದ ಬಗ್ಗೆ ನೋಡೋಣ ಎನ್ನುವವರಿಗೆ ಅಂತಹದ್ದೇನು ತೊಂದರೆ ಇಲ್ಲ. ಆದರೆ, ಮನೆಯ ಪರಿಸ್ಥಿತಿ, ಜವಾಬ್ದಾರಿ ಹೊರಬೇಕಾದವರು ಭವಿಷ್ಯವನ್ನು ರೂಪಿಸಿಕೊಳ್ಳಲು ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ನಂತರದಲ್ಲಿ ಐಟಿಐ ನಂತರ ಒಂದು ಅಥವಾ ಎರಡು ವರ್ಷದ ಕೋರ್ಸ್‍ಗಳನ್ನು ಪೂರೈಸಿ ನೇರವಾಗಿ ಕೆಲಸ ಸೇರುವಂತಹ ಸೌಲಭ್ಯವು ನಮ್ಮಲ್ಲಿದೆ ಎಂಬುದನ್ನು ಮರೆಯುವಂತಿಲ್ಲ.

ಇಂತಹ ಕೋರ್ಸ್‍ಗಳಲ್ಲಿ ಕಂಪ್ಯೂಟರ್ ಆದಿಯಾಗಿ ಎಲೆಕ್ಟ್ರಾನಿಕ್ಸ್, ಶೀಟ್‍ಮೆಟಲ್, ಡ್ರಾಫ್ಟ್‍ಮೆನ್, ವೆಲ್ಡರ್, ಫಿಟ್ಟರ್ ಸೇರಿದಂತೆ 24 ಕೋರ್ಸ್‍ಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಂಗಾವಲಾಗಿವೆ.  ಸರ್ಕಾರಿ ಸ್ವಾಮ್ಯದ ಐಟಿಐ ಇಂತಹ ಹಲವಾರು ಕೋರ್ಸ್‍ಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಿದ್ದು, ಬಿಎಚ್‍ಇಎಲ್,  ಇಸ್ರೋ, ಟಯೋಟ ನಂತಹ ಕಂಪೆನಿಗಳಲ್ಲೂ ಇಂದು ಇಂತಹ ಕೌಶಲ್ಯಾಧಾರಿತ ಕೆಲಸಗಾರರ ಅವಶ್ಯಕತೆ ಬಹಳಷ್ಟಿದ್ದು, ಕೆಪಿಎಸ್‍ಸಿ ಪರೀಕ್ಷೆ ಮೂಲಕವೂ ಐಟಿಐ ಪೂರೈಸಿದವರಿಗೆ ರಾಜ್ಯದಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ ಎಂಬುದು ಗಮನಾರ್ಹ. ಆರು ತಿಂಗಳಿನಿಂದ ಹಿಡಿದು ಎರಡು ವರ್ಷಗಳ ಹಲವು  ಕೋರ್ಸ್‍ಗಳಿದ್ದು, ಹೊರ ಊರಿನವರಿಗೆ ಹಾಸ್ಟೆಲ್ ಸೌಲಭ್ಯ, ದುಬಾರಿ ಅಲ್ಲದ ಶುಲ್ಕ ಪಾವತಿಸಿ ತಮಗೆ ಇಷ್ಟ ಬಂದ ಕ್ಷೇತ್ರದಲ್ಲಿ ಕೆಲಸ ಕಲಿಯಬಹುದು.
ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸರ್ಕಾರಿ ಐಟಿಐ ಬಹಳಷ್ಟು ಹೆಸರು ಮಾಡಿದೆ. ನಗರದ ಕಿದ್ವಾಯಿ ಬಳಿಯಿರುವ ಈ ಐಟಿಐ ದಶಕಗಳೇ ಪೂರೈಸಿ ಒಳ್ಳೊಳ್ಳೆ ಸಿಬ್ಬಂದಿ ಉತ್ತಮ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿದ್ದಾರೆ.

ಇಂದಿನ ಸ್ಪರ್ಧಾ ಪ್ರಪಂಚದಲ್ಲಿ ಉದ್ಯೋಗ ಸಿಗದೆ ಪರಿತಪಿಸುವವರ ನಡುವೆ ಐಟಿಐ ಪೂರೈಸಿರುವವರು ಕೋರ್ಸ್ ಪೂರೈಸಿ 1-2 ವರ್ಷದೊಳಗೆ ಕೆಲಸ ದೊರೆತು ಜೀವನಕ್ಕೆ ಭದ್ರ ಬುನಾದಿ ಹಾಕಿಕೊಳ್ಳಲು ಸಾಧ್ಯ.  ಅವರನ್ನು ವಿದ್ಯಾರ್ಥಿನಿಯರಿಗೆ ಡ್ರೆಸ್ ಮೇಕಿಂಗ್‍ನಿಂದ ಹಿಡಿದು ಆಫೀಸ್ ಅಡ್ಮಿನಿಸ್ಟ್ರೇಷನ್ ನಂತಹ ಹಲವಾರು ಕೋರ್ಸ್‍ಗಳ ತರಬೇತಿ ನೀಡಿ ಉತ್ತಮ ಜೀವನಕ್ಕೆ ಅವಕಾಶ ಮಾಡಿಕೊಡುತ್ತಿದೆ. ಬೆಂಗಳೂರಿನ ಹೊಸೂರು ರಸ್ತೆಯ ಈ ಸರ್ಕಾರಿ ಐಟಿಐ ವರ್ಷದಲ್ಲೇ ಎರಡನೇ ಅತಿದೊಡ್ಡ ಐಟಿಐ ಎಂಬ ಖ್ಯಾತಿ ಪಡೆದು ಕೋರ್ಸ್‍ಗಳಿಂದ ಅಷ್ಟೇ ಜನಪ್ರಿಯತೆ ಪಡೆದಿದೆ.

ಭಾರತದಲ್ಲೇ ಮಾದರಿ ಸಂಸ್ಥೆಯಾಗಿ ಗುರುತಿಸಿ ಕೊಂಡಿರುವ ಈ ಸಂಸ್ಥೆ ಕೇಂದ್ರ ಸರ್ಕಾರದ ವಿಶೇಷ ಅನುದಾನಕ್ಕೆ ಪಾತ್ರವಾಗಿ ಕಳೆದ ಎರಡು ವರ್ಷಗಳ ಹಿಂದೆ ಮೆಕಾನಿಕಲ್ ಮೋಟಾರ್ ಬಾಡಿ ರಿಪೇರ್, ಮೆಕ್ಯಾನಿಕಲ್ ರೋಬೊ ಬಾಡಿ ಪೆಂಟಿಂಗ್ ನಂತಹ ನೂತನ ಕೋರ್ಸ್‍ಗಳನ್ನು ಆರಂಭಿಸಿ ಆಟೋ ಮೊಬೈಲ್ ಸೆಕ್ಟರ್‍ನಲ್ಲಿ ಐಟಿಐ ವಿದ್ಯಾರ್ಥಿಗಳು ಕೆಲಸ ನಿರ್ವಹಿಸಲು ಹೆಚ್ಚಿನ ಅವಕಾಶ ಕಲ್ಪಿಸಿದೆ.

ಕೌಶಲ್ಯಾಧಾರಿತ ಶಿಕ್ಷಣವಾಗಿರುವ ಈ ಸಂಸ್ಥೆ ಪ್ರಮುಖ ಕಂಪೆನಿಗಳೊಂದಿಗೆ ಅದರಲ್ಲೂ ಸ್ಯಾಮ್‍ಸಂಗ್, ಬಾಷ್, ಮಾರುತಿ, ಸೀಮೆನ್ಸ್‍ನಂತಹ ಕಂಪೆನಿಗಳವರು ಒಪ್ಪಂದ ಮಾಡಿಕೊಂಡು ಐಟಿಐ ವಿದ್ಯಾರ್ಥಿಗಳಿಗೆ ತರಬೇತಿಗೊಳಿಸಲು ಮುಂದಾಗಿದ್ದಾರೆ. ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗಂತೂ ಐಟಿಐನಲ್ಲಿ  ಸಾಕಷ್ಟು ಅವಕಾಶ ಕಲ್ಪಿಸಲಾಗಿದ್ದು, ಆ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್, ಸ್ಕಾಲರ್‍ಶಿಪ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇಂದಿನ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ನಂತರದ ಕೋರ್ಸ್ ಬಗ್ಗೆ ಯೋಚಿಸುವಾಗ ಐಟಿಐನ ಕೋರ್ಸ್ ಅರಿತು ಮುನ್ನಡೆಯುವುದು ಉತ್ತಮ.  ಸುಲಭವಾಗಿ ಕೆಲಸ ಸಿಗುವ ಅಗತ್ಯ ಬಿದ್ದರೆ ಸ್ವಂತ ಉದ್ದಿಮೆಯನ್ನು ಕಡಿಮೆ ಬಂಡವಾಳದಲ್ಲಿ ಮಾಡಬಹು ದಾಗಿರುವುದರಿಂದ ಇಂತಹ ಐಟಿಐ ಕೋರ್ಸ್‍ಗಳು ಹೆಚ್ಚು ಉಪಯುಕ್ತ ಅದನ್ನು ಒಮ್ಮೆ ನೋಡಿ ಆಯ್ಕೆ ಮಾಡಿಕೊಳ್ಳುವ ವಿಚಾರ ಮಾಡುವುದು ಒಳಿತು.

Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Sri Raghav

Admin