ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಕೆ ಕಡ್ಡಾಯ

Spread the love

CCTV
ಬೆಂಗಳೂರು,ಜ.17- ಪರೀಕ್ಷಾ ಸಮಯದಲ್ಲಿ ಹೆಚ್ಚುತ್ತಿರುವ ನಕಲು(ಕಾಪಿ) ತಡೆಗಟ್ಟಲು ಮುಂದಾಗಿರುವ ರಾಜ್ಯ ಸರ್ಕಾರ ಈ ಬಾರಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಾದ್ಯಂತ ಎಲ್ಲ ಕೇಂದ್ರಗಳಿಗೆ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಲಿದೆ. ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ ಆರಂಭವಾಗಲಿರುವ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗೆ ಸಿಸಿ ಕ್ಯಾಮೆರಾ ಅಳವಡಿಸಲು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ಹಾಗೂ ಪದವಿಪೂರ್ವ ಶಿಕ್ಷಣ ಮಂಡಳಿ ಮುಂದಾಗಿದೆ.
ಎಸ್ಸೆಸ್ಸಲ್ಸಿ ಹಾಗೂ ಪಿಯುಸಿ ಪರೀಕ್ಷೆ ನಡೆಯುವ 3300 ಪರೀಕ್ಷಾ ಕೇಂದ್ರಗಳಿಗೆ ಕಡ್ಡಾಯವಾಗಿ ಸಿಸಿ ಕ್ಯಾಮೆರಾ ಅಳವಡಿಸಲು ಅಗತ್ಯ ತಯಾರಿ ಕೈಗೊಳ್ಳುವಂತೆ ಎರಡೂ ಮಂಡಳಿಯು ಈಗಾಗಲೇ ಜಿಲ್ಲಾ ಸಾರ್ವಜನಿಕ ಶಿಕ್ಷಣಿ ಇಲಾಖೆ ಉಪನಿರ್ದೇಶಕರು (ಡಿಡಿಪಿಐ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ(ಬಿಇಒ)ಗಳಿಗೆ ಸೂಚಿಸಲಾಗಿದೆ.
ಈಗಾಗಲೇ 3300 ಪರೀಕ್ಷಾ ಕೇಂದ್ರಗಳ ಪೈಕಿ 1390 ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಉಳಿದಿರುವ ಕೇಂದ್ರಗಳಿಗೆ ಫೆಬ್ರವರಿ ಮಧ್ಯ ಭಾಗದೊಳಗೆ ಅಳವಡಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ.

ಸಿಸಿ ಕ್ಯಾಮೆರಾ ಅಳವಡಿಸುವ ಸಂಬಂಧ ಪದವಿಪೂರ್ವ ಶಿಕ್ಷಣ ಮಂಡಳಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಟೆಂಡರ್ ಆಹ್ವಾನಿಸಿದೆ. ಫೆಬ್ರವರಿ 15ರೊಳಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕೆಂದು ಅಧಿಕಾರಿಗಳು ಸೂಚಿಸಿದ್ದಾರೆ. ಕಳೆದ ವರ್ಷ ನಡೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆ ವೇಳೆ ವ್ಯಾಪಕ ನಕಲು ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಇಲಾಖೆ ಭಾರೀ ಮುಜುಗರಕ್ಕೆ ಸಿಲುಕಿತ್ತು. ಕೆಲವು ಕಡೆ ಫಲಿತಾಂಶ ಹೆಚ್ಚಿಸಿಕೊಳ್ಳಲು ಶಿಕ್ಷಕರೇ ವಿದ್ಯಾರ್ಥಿಗಳಿಗೆ ನಕಲು ಮಾಡಿಸುತ್ತಿದ್ದ ದೃಶ್ಯ ಕಂಡುಬಂದಿತ್ತು. ಅನುದಾನ ಮತ್ತು ಸರ್ಕಾರಿ ಶಾಲೆಗಳಲ್ಲಿ ಫಲಿತಾಂಶ ಕಡಿಮೆ ಬಂದರೆ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಇಲಾಖೆ ಎಚ್ಚರ ನೀಡಿತ್ತು. ಇದರ ಪರಿಣಾಮವೇ ಶಿಕ್ಷಕರೇ ಕೆಲವು ಕಡೆ ನಕಲು ಮಾಡಲು ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಿದ್ದರು.

ಇನ್ನು ಕಳೆದ ವರ್ಷ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ವಿದ್ಯಾರ್ಥಿಗಳು ಭಾರೀ ಸಂಕಟಕ್ಕೆ ಸಿಲುಕಿದ್ದರು. ಈ ಎಲ್ಲ ಅವಘಡಗಳನ್ನು ತಪ್ಪಿಸಲು ಮುಂದಾಗಿರುವ ಇಲಾಖೆ ಸಿಸಿ ಕ್ಯಾಮೆರಾಗಳನ್ನು ಹಾಕುವ ಮೂಲಕ ಅಕ್ರಮಗಳಿಗೆ ಶಾಶ್ವತ ಕಡಿವಾಣ ಹಾಕಲು ತೀರ್ಮಾನಿಸಿದೆ. ಕಳೆದ ವರ್ಷ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಹಾಕಲಾಗಿತ್ತು. ಆದರೆ ಎಲ್ಲ ಕಡೆ ಇದನ್ನು ಅಳವಡಿಸಿದರೆ ಅಕ್ರಮ ತಡೆಯಲು ಸಾಧ್ಯವಾಗುತ್ತದೆ ಎಂದು ಕೆಲ ಶಿಕ್ಷಣ ತಜ್ಞರು ಸರ್ಕಾರಕ್ಕೆ ಸಲಹೆ ಮಾಡಿದ್ದರು.

ಇದನ್ನು ಸಕರಾತ್ಮಕವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಸಿಸಿ ಕ್ಯಾಮೆರಾ ಅಳವಡಿಕೆಗೆ ಹಸಿರುನಿಶಾನೆ ತೋರಿದ್ದಾರೆ. ನಾವು ಈ ಬಾರಿ ಪರೀಕ್ಷೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಗಟ್ಟಲು ಸಿಸಿ ಕ್ಯಾಮೆರಾ ಹಾಕಲಿದ್ದೇವೆ. ಇದಕ್ಕಾಗಿ ನಾವು ಎಲ್ಲ ರೀತಿಯ ಸಿದ್ದತೆಗಳನ್ನು ಕೈಗೊಂಡಿದ್ದೇವೆ ಎಂದು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿ ನಿರ್ದೇಶಕಿ ಸುಮಂಗಲ.ವಿ ತಿಳಿಸಿದ್ದಾರೆ.

Facebook Comments

Sri Raghav

Admin