ಏಪ್ರಿಲ್ ವೇಳೆಗೆ ಪ್ರಾರಂಭಿಸಿರುವ ‘ನಮ್ಮ ಮೆಟ್ರೋ’ ಕಾಮಗಾರಿ ಪೂರ್ಣ

Spread the love

metro

ಬೆಂಗಳೂರು, ಜ.16- ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಣಕ್ಕೆ ತರಲು ಪ್ರಾರಂಭಿಸಿರುವ ನಮ್ಮ ಮೆಟ್ರೋ ರೈಲು ಏಪ್ರಿಲ್ ಅಂತ್ಯಕ್ಕೆ ಪೂರ್ಣಗೊಳ್ಳಲಿದ್ದು, ಸಾರ್ವಜನಿಕರ ಸೇವೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.  ವಿಕಾಸಸೌಧದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.  ಮೆಟ್ರೋ ಈಗಾಗಲೇ ಮೊದಲನೆ ಹಂತದಲ್ಲಿ ಕೆಲವು ಕಡೆ ಪ್ರಯಾಣಿಕರ ಸೇವೆಗೆ ಲಭ್ಯವಿದ್ದು, ಮೊದಲ ಹಂತದ 42ಕಿಮೀ ಯೋಜನೆ ಏಪ್ರಿಲ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದರಿಂದ ನಗರದಲ್ಲಿ ಒಂದಷ್ಟು ಸಂಚಾರ ಸಮಸ್ಯೆ ನಿವಾರಣೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಮೆಟ್ರೋ ಮೂರನೆ ಹಂತದ ಯೋಜನೆ 72ಕಿಮೀ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾಗುವುದು. ಇದಕ್ಕೆ ಒಟ್ಟು 13,845 ಕೋಟಿ ರೂ. ವೆಚ್ಚ ತಗುಲಲಿದ್ದು, ಕೇಂದ್ರ ಹಾಗೂ ರಾಜ್ಯಗಳ ಸಹಭಾಗಿತ್ವದ ಯೋಜನಾ ವೆಚ್ಚ ನಿಗದಿಯಾಗಲಿದೆ. ಸಂಪನ್ಮೂಲ ಕ್ರೋಢೀಕರಣಕ್ಕೆ ಹೊಸ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗಿದೆ ಎಂದರು.

2020ರ ವೇಳೆಗೆ ಈ ಯೋಜನೆಯು ಪೂರ್ಣ ಗೊಳ್ಳಲಿದ್ದು, ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ. ಈಗಿನ ಕಾಮಗಾರಿಯನ್ನು ಅವಲೋಕಿಸಿದರೆ ನಿರೀಕ್ಷಿತ ಅವಯಲ್ಲೇ ಕಾಮಗಾರಿ ಮುಗಿಯಲಿದೆ ಎಂದರು.  ಮೆಟ್ರೋ ಎರಡನೆ ಹಂತದಲ್ಲಿ ಸಿಲ್ಕ್ ಬೋರ್ಡ್‍ನಿಂದ ಕೆಆರ್ ಪುರಂವರೆಗೆ 18ಕಿಮೀ ಉದ್ದದ ರೈಲು ಮಾರ್ಗ ನಿರ್ಮಾಣ ಮಾಡಲು ಅಕಾರಿಗಳು ಯೋಜನೆ ಸಿದ್ಧಪಡಿಸಿದ್ದಾರೆ. ಇದಕ್ಕೆ ಒಟ್ಟು 4200 ಕೋಟಿ ಯೋಜನಾ ವೆಚ್ಚ ತಗುಲಲಿದ್ದು, ಸಂಪನ್ಮೂಲ ಕ್ರೋಢೀಕರಣಕ್ಕೆ ರಾಜ್ಯ ಸರ್ಕಾರ ಯೋಜನೆಯ ಪ್ರಸ್ತಾವನೆ ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸಿಕೊಡಬೇಕೆಂದು ಸಲಹೆ ಮಾಡಿದರು.  ನಾಗವಾರದಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದವರೆಗೆ 30ಕಿಮೀ ಸಂಪರ್ಕಿಸುವ ಮಾರ್ಗ ರೂಪಿಸಲು ಅಕಾರಿಗಳಿಗೆ ಸೂಚಿಸಲಾಗಿದೆ ಎಂದರು.
2020ರ ವೇಳೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೋಗುವವರು ಮತ್ತು ಬರುವ ಪ್ರಯಾಣಿಕರ ಸಂಖ್ಯೆ 50 ದಶಲಕ್ಷ ದಾಟಿದೆ. ಈ ವೇಳೆ ನಗರದಲ್ಲಿ ಸಂಚಾರ ದಟ್ಟಣೆ ಇನ್ನಷ್ಟು ಹೆಚ್ಚಾಗಲಿದೆ. ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡೇ ಈ ಯೋಜನೆ ರೂಪಿಸಲಾಗಿದೆ ಎಂದು ವಿವರಿಸಿದರು. ಒಟ್ಟಾರೆ ನಗರದಲ್ಲಿ ಇಂದು 224 ಕಿಮೀ ಮೆಟ್ರೋ ರೈಲು ಯೋಜನೆ ಪೂರ್ಣಗೊಳಿಸಲು ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.  16 ಇಲಾಖೆಗಳ 150 ಕೋಟಿ ರೂ.ಗೂ ಹೆಚ್ಚಿನ ಮೊತ್ತದ ಯೋಜನೆಗಳ ಬಗ್ಗೆ ಪರಿಶೀಲನೆ ನಡೆಸುವುದು ನಮ್ಮ ಜವಾಬ್ದಾರಿ. ದೇಶದಲ್ಲಿ ಒಟ್ಟು 1169 ಯೋಜನೆಗಳು ಜಾರಿಯಲ್ಲಿವೆ. ರಾಜ್ಯದಲ್ಲಿ 44 ಯೋಜನೆಗಳಿಗೆ 93 ಸಾವಿರ ಕೋಟಿ ರೂ. ಅನುದಾನವನ್ನು ರಾಜ್ಯ-ಕೇಂದ್ರ ಸರ್ಕಾರ ನೀಡಿದೆ ಎಂದು ತಿಳಿಸಿದರು.   ಕರ್ನಾಟಕದಲ್ಲಿ 14 ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿವೆ. ಈ ಪೈಕಿ 10 ಯೋಜನೆಗಳು ಪ್ರಗತಿಯಲ್ಲಿದ್ದರೆ, 40 ರೈಲ್ವೆ ಯೋಜನೆಗಳು ಪರಿಶೀಲನಾ ಹಂತದಲ್ಲಿವೆ. ರಾಜ್ಯ ಸರ್ಕಾರ ಉತ್ತಮ ಸಹಕಾರ ನೀಡುತ್ತಿದೆ. ಈ 12 ಯೋಜನೆಗಳನ್ನು ನಿಗದಿತ ಅವಯೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.  ಸಭೆಯಲ್ಲಿ ಸಚಿವರಾದ ಕೆ.ಜೆ.ಜಾರ್ಜ್, ಆರ್.ವಿ. ದೇಶಪಾಂಡೆ, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin