ಏರ್ ಇಂಡಿಯಾ 225 ಕೋಟಿ ರೂ. ಸಾಫ್ಟ್ವೇರ್ ಖರೀದಿ ಹಗರಣ : ಅಧಿಕಾರಿಗಳ ವಿರುದ್ಧ ಸಿಬಿಐ ಎಫ್ಐಆರ್
ನವದೆಹಲಿ, ಜ.14-ಏರ್ ಇಂಡಿಯಾ (ಎಐ) ಸಂಸ್ಥೆಯಿಂದ 2011ರಲ್ಲಿ 225 ಕೋಟಿ ರೂ. ಮೊತ್ತದ ಸಾಫ್ಟ್ವೇರ್ ಖರೀದಿ ಹಗರಣದಲ್ಲಿ ಅಕ್ರಮ-ಅವ್ಯವಹಾರಗಳು ನಡೆದಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಎಐ, ಜರ್ಮನಿಯ ಎಸ್ಎಪಿ ಎಜಿ ಮತ್ತು ಐಬಿಎಂ ಕಂಪ್ಯೂಟರ್ಸ್ನ ಅಜ್ಞಾತ ಅಧಿಕಾರಿಗಳ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಎಫ್ಐಆರ್ ದಾಖಲಿಸಿದೆ.
ಸಾಫ್ಟ್ವೇರ್ ಖರೀದಿಯಲ್ಲಿ ಅಕ್ರಮಗಳು ನಡೆದಿರುವುದು ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ತನಿಖೆ ನಡೆಸಲು ಕೇಂದ್ರೀಯ ಜಾಗೃತ ಆಯೋಗ ಶಿಫಾರಸು ಮಾಡಿದ ನಂತರ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಏರ್ ಇಂಡಿಯಾದ ಮುಖ್ಯ ಜಾಗೃತ ಅಧಿಕಾರಿ ವರದಿಗಳನ್ನು ಪರಿಶೀಲಿಸಿದ ನಂತರ ಆಯೋಗವು ಸಿಬಿಐಗೆ ಪತ್ರ ಬರೆದು ಸಾಫ್ಟ್ವೇರ್ ಖರೀದಿಯಲ್ಲಿ ಗಂಭೀರ ಅಕ್ರಮ-ಅವ್ಯವಹಾರಗಳು ನಡೆದಿವೆ ಎಂದು ತಿಳಿಸಿತ್ತು.
ಅಲ್ಲದೇ 225 ಕೋಟಿ ರೂ.ಗಳ ಹಗರಣದಲ್ಲಿ ಎಐ, ಜರ್ಮನಿಯ ಎಸ್ಎಪಿ ಎಜಿ ಮತ್ತು ಐಬಿಎಂ ಕಂಪ್ಯೂಟರ್ಸ್ನ ಅಧಿಕಾರಿಗಳೂ ಷಾಮೀಲಾಗಿದ್ದಾರೆ ಎಂಬ ಬಲವಾದ ಸಂಶಯ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಸಿಬಿಐ ಎಫ್ಐಅರ್ ದಾಖಲಿಸಿದೆ.