ಐಎಎಸ್ ಅಧಿಕಾರಿಗಳ ವರ್ಗಾವಣೆ : ಸಿಎಂ ವಿರುದ್ಧ ತನ್ವೀರ್ ಸೇಠ್ ಅಸಮಾಧಾನ
ಬೆಂಗಳೂರು, ಅ.26-ಐಎಎಸ್ ಅಧಿಕಾರಿಗಳ ವರ್ಗಾವಣೆ ಸಂಬಂಧ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಐಎಎಸ್ ಅಧಿಕಾರಿ ಅಜಯ್ ಸೇಠ್ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಗಳ ಹಿನ್ನೆಲೆಯಲ್ಲಿ ಇನ್ನೂ ಆರು ತಿಂಗಳ ಕಾಲ ಅಜಯ್ ಸೇಠ್ ಅವರನ್ನು ವರ್ಗಾವಣೆ ಮಾಡದಂತೆ ಸಿಎಂ ಬಳಿ ತನ್ವೀರ್ ಸೇಠ್ ಮನವಿ ಮಾಡಿದ್ದರು. ಪರೀಕ್ಷೆ ಸಿದ್ಧತೆ ಸಮಯ ಸಮೀಪಿಸುತ್ತಿರುವುದರಿಂದ ಅವರನ್ನು ಮಾತೃ ಇಲಾಖೆಯಲ್ಲಿಯೇ ಉಳಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪದೇ ಪದೇ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ, ಈ ಸಂಬಂಧ ತನ್ವೀರ್ ಸೇಠ್ ಅಧಿಕೃತವಾಗಿ ಸಿಎಂ ಅವರಿಗೆ ಪತ್ರ ಬರೆದಿದ್ದಾರೆ. ಹೀಗಿದ್ದರೂ ಅಜಯ್ ಸೇಠ್ ಅವರನ್ನು ಆರೋಗ್ಯ ಇಲಾಖೆಗೆ ವರ್ಗಾಯಿಸಲಾಗಿದೆ.
2017-18ರ ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳನ್ನು ಮಾರ್ಚ್ 2018ರ ವೇಳೆಗೆ ಪೂರ್ಣಗೊಳಿಸಬೇಕಾದ ಅನಿವಾರ್ಯತೆಯಿದೆ. ಕಳೆದ ವರ್ಷದ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಯಾವುದೇ ಒಂದು ಸಣ್ಣ ತಪ್ಪುಗಳಿಲ್ಲದೇ ಪೂರ್ಣಗೊಂಡಿದ್ದವು. ಇದಕ್ಕಾಗಿ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು, 2018ರ ಮಾರ್ಚ್ ಪರೀಕ್ಷೆ ಕೂಡ ಇದೇ ರೀತಿ ಆಗಬೇಕಿದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಇಲಾಖೆಯ ಹಿತಾಸಕ್ತಿ ದೃಷ್ಟಿಯಿಂದ ಅಜಯ್ ಸೇಠ್ ಅವರನ್ನು ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿಯೇ ಮುಂದುವರಿಸಬೇಕೆಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.